ಉತ್ತರಕೊರಿಯದ ರಾಕೆಟ್ ಉಡಾವಣೆಯು ದೂರಗಾಮಿ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಇನ್ನೊಂದು ಹೆಜ್ಜೆಯೆಂದು ನ್ಯಾಟೊ ರಾಷ್ಟ್ರಗಳು ಖಂಡಿಸಿದ್ದು, ಎಲ್ಲ ಖಂಡಾಂತರ ಕ್ಷಿಪಣಿ ಕಾರ್ಯಕ್ರಮಗಳನ್ನು ತ್ಯಜಿಸುವಂತೆ ಒತ್ತಾಯಿಸಿದೆ.
ಉತ್ತರಕೊರಿಯದ ದೂರಗಾಮಿ ಖಂಡಾಂತರ ಕ್ಷಿಪಣಿ ಅಭಿವೃದ್ಧಿಯಲ್ಲಿ ಈ ಉಡಾವಣೆಯು ಇನ್ನೊಂದು ಹೆಜ್ಜೆಯೆಂದು ನ್ಯಾಟೊ ರಾಯಭಾರಿಗಳು ಬ್ರಸೆಲ್ಸ್‌ನಲ್ಲಿರುವ ಮೈತ್ರಿಕೂಟದ ಮುಖ್ಯಕಚೇರಿಯಲ್ಲಿ ಭೇಟಿ ಬಳಿಕ ಹೇಳಿದರು.
ಬೇಜವಾಬ್ದಾರಿ ಮತ್ತು ಪ್ರಚೋದನಾಕಾರಿಯಾದ ವ್ಯೋಂಗ್‌ಯಾಂಗ್ ಕ್ರಮಗಳಿಂದ ಈ ಪ್ರದೇಶಕ್ಕೆ ಗಂಭೀರ ಬೆದರಿಕೆಯೊಡ್ಡಿದೆ ಎಂದು ಅವು ಹೇಳಿವೆ. ಉತ್ತರ ಕೊರಿಯ ಎಲ್ಲ ಖಂಡಾಂತರ ಕ್ಷಿಪಣಿ ಕಾರ್ಯಕ್ರಮಗಳನ್ನು ತ್ಯಜಿಸಿ, ಪ್ರಸ್ತುತ ಎಲ್ಲ ವಿಶ್ವಸಂಸ್ಥೆ ಭದ್ರತಾಮಂಡಳಿಯ ನಿರ್ಣಯಗಳನ್ನು ಪೂರ್ಣವಾಗಿ ಜಾರಿಗೆ ತಂದು, ಪರಮಾಣು ಅಸ್ತ್ರಗಳು ಮತ್ತು ಸಂಬಂಧಿಸಿದ ಕಾರ್ಯಕ್ರಮಗಳನ್ನು ನಿರ್ಮೂಲನೆ ಮಾಡಬೇಕೆಂದು ನ್ಯಾಟೊ ತಿಳಿಸಿದೆ.
ತಾವು ಉಡಾಯಿಸಿದ ರಾಕೆಟ್ ಕಕ್ಷೆಯಲ್ಲಿ ಸಂಪರ್ಕ ಉಪಗ್ರಹವನ್ನು ಇರಿಸಿದೆಯೆಂದು ಉತ್ತರಕೊರಿಯ ಹೇಳುತ್ತಿದೆ. ಆದರೆ ಬಾಹ್ಯಾಕಾಶದಲ್ಲಿ ಯಾವುದೇ ಉಪಕರಣದ ಲಕ್ಷಣ ಕಂಡುಬಂದಿಲ್ಲ ಮತ್ತು ಉಡಾವಣೆಯು ದೂರಗಾಮಿ ಕ್ಷಿಪಣಿ ಪರೀಕ್ಷೆಯ ಛದ್ಮವೇಷವೆಂದು ದಕ್ಷಿಣ ಕೊರಿಯ, ಜಪಾನ್ ಮತ್ತು ಅಮೆರಿಕ ಮಿಲಿಟರಿ ಆರೋಪಿಸಿವೆ. |