ಕಡಲ್ಗಳ್ಳರು ಬುಧವಾರ ಅಪಹರಿಸಿರುವ ಅಮೆರಿಕದ ಸರಕು ಸಾಗಣೆ ಹಡಗು ಇರುವ ಸೊಮಾಲಿಯ ತೀರಕ್ಕೆ ಅಮೆರಿಕದ ಸಮರವಿಮಾನ ಯುಎಸ್‌ಎಸ್ ಬೈನ್‌ಬ್ರಿಜ್ ತಲುಪಿದೆ.
ಅಮೆರಿಕದ ಸಿಬ್ಬಂದಿಯು ಹಡಗನ್ನು ಮರುವಶಕ್ಕೆ ತೆಗೆದುಕೊಂಡಿದ್ದರೂ ಹಡಗಿನ ಕ್ಯಾಪ್ಟನ್ ಕಡಲ್ಗಳ್ಳರ ಕೈಗೆ ಒತ್ತೆಯಾಳಾಗಿ ಸಿಕ್ಕಿಬಿದ್ದಿದ್ದಾರೆ. ಕಡಲ್ಗಳ್ಳರ ದೋಣಿಯು ಮಾಯೆರ್ಸ್ಕ್ ಅಲಾಬಾಮಾ ಬಳಿ ಸಂಚರಿಸುತ್ತಿದ್ದು, ಆ ದಿಕ್ಕಿನಲ್ಲಿ ಸುಮಾರು 6 ಹಡಗುಗಳು ಪ್ರಯಾಣಿಸಿವೆ.ಸರ್ಕಾರ ಪರಿಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ನಿಗಾವಹಿಸಿದ್ದು, ಕಡಲ್ಗಳ್ಳತನದ ಪಿಡುಗಿನ ಮುಕ್ತಾಯಕ್ಕೆ ಕಾರ್ಯೋನ್ಮುಖವಾಗುವಂತೆ ಜಗತ್ತಿನ ರಾಷ್ಟ್ರಗಳಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಕರೆ ನೀಡಿದ್ದಾರೆ.
ಹಡಗಿನ ಸಿಬ್ಬಂದಿ ತಮ್ಮ ಕ್ಯಾಪ್ಟನ್ ರಿಚರ್ಡ್ ಫಿಲಿಪ್ಸ್ ಎಂಬವರ ಬಿಡುಗಡೆಗೆ ಮಾತುಕತೆ ನಡೆಸಿ ಸೆರೆಹಿಡಿದಿದ್ದ ಕಡಲ್ಗಳ್ಳನನ್ನು ಬಿಡುಗಡೆ ಮಾಡಿದ್ದರು. ಆದರೆ ಕಡಲ್ಗಳ್ಳರ ಗ್ಯಾಂಗ್ ಹಡಗಿನ ಕ್ಯಾಪ್ಟನ್ ಬಿಡುಗಡೆಗೆ ನಿರಾಕರಿಸುತ್ತಿದ್ದು, ಒತ್ತೆಹಣಕ್ಕಾಗಿ ಅವರನ್ನು ಸೆರೆಹಿಡಿದಿಡಲು ಬಯಸಿದ್ದಾರೆಂದು ಎರಡನೇ ದಂಡಾಧಿಕಾರಿ ಕ್ವಿನ್ ತಿಳಿಸಿದ್ದಾರೆ. ದಾಳಿಕೋರರು ಜೀವರಕ್ಷಕ ದೋಣಿಯಲ್ಲಿ ಪಲಾಯನ ಮಾಡಿದ್ದು ಹಡಗಿನ ಸಿಬ್ಬಂದಿಯು ಕ್ಯಾಪ್ಟನ್ ಫಿಲಿಪ್ಸ್ ಜತೆ ರೇಡಿಯೋ ಸಂಪರ್ಕ ಹೊಂದಿದ್ದಾರೆಂದು ಅವರು ಹೇಳಿದ್ದಾರೆ. |