ಟಿಬೆಟ್‌ನಲ್ಲಿ ಒಂದು ವರ್ಷದ ಕೆಳಗೆ ಸಂಭವಿಸಿದ ಚೀನಾ ವಿರೋಧಿ ಆಂದೋಳನದಲ್ಲಿ ಬೆಂಕಿಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಚೀನಾ ಇಬ್ಬರು ಟಿಬೆಟಿಯನ್ನರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ.
ಲಾಸಾದಲ್ಲಿ ಕಳೆದ ಮಾರ್ಚ್‌ನಲ್ಲಿ ಸಂಭವಿಸಿದ ವ್ಯಾಪಕ ಗಲಭೆಗಳಿಗೆ ಸಂಬಂಧಿಸಿದಂತೆ ಇದು ಪ್ರಥಮ ಮರಣದಂಡನೆ ಶಿಕ್ಷೆಗಳಾಗಿವೆ. ಸರ್ಕಾರಿ ವಿರೋಧಿ ಆಂದೋಳನದಲ್ಲಿ ಸುಮಾರು 20 ಜನರು ಮೃತಪಟ್ಟಿದ್ದಾರೆಂದು ಚೀನಾ ಹೇಳಿದ್ದರೂ, ಗಡಿಪಾರಾದ ಟಿಬೆಟ್ ವಲಯಗಳು ಹೇಳುವ ಪ್ರಕಾರ 200ಕ್ಕೂ ಹೆಚ್ಚು ಟಿಬೆಟಿಯನ್ನರು ಮೃತಪಟ್ಟಿದ್ದರು.
ಅಂದು ನಡೆದ ಗಲಭೆಗಳ ಫಲವಾಗಿ ನೂರಾರು ಜನರನ್ನು ಬಂಧಿಸಲಾಗಿದ್ದು, ಅನೇಕ ಮಂದಿ ಈಗಾಗಲೇ ದೀರ್ಘಾವಧಿ ಜೈಲುಶಿಕ್ಷೆಗಳನ್ನು ಅನುಭವಿಸಿದ್ದಾರೆ. ಚೀನಾ ಮಾನವ ಹಕ್ಕು ಉಲ್ಲಂಘನೆಯನ್ನು ವ್ಯಾಪಕ ಪ್ರಮಾಣದಲ್ಲಿ ಮಾಡಿದೆಯೆಂಬ ಕೂಗು ಕೇಳಿಬಂದಿತ್ತು.
ಮರಣದಂಡನೆ ಶಿಕ್ಷೆಗೆ ಗುರಿಯಾದ ಇಬ್ಬರು ಬೆಂಕಿಹಚ್ಚುವಲ್ಲಿ ಪ್ರಮುಖ ಪಾತ್ರವಹಿಸಿದ್ದರಿಂದ ಲಾಸಾದಲ್ಲಿ 7 ಜನರು ಸತ್ತಿದ್ದು, ಐದು ಅಂಗಡಿಗಳು ನಾಶವಾಗಿವೆ ಎಂದು ಚೀನಾದ ರಾಜ್ಯ ಮಾಧ್ಯಮ ವರದಿ ಮಾಡಿತ್ತಲ್ಲದೇ ಲಾಸಾ ಮುನ್ಸಿಪಲ್ ಇಂಟರ್‌ಮೀಡಿಯೆಟ್ ಪೀಪಲ್ಸ್ ಕೋರ್ಟ್ ಅಗ್ನಿಸ್ಪರ್ಶಕ್ಕೆ ಸಂಬಂಧಪಟ್ಟಂತೆ ಇನ್ನೂ ಮೂವರಿಗೆ ಶಿಕ್ಷೆ ವಿಧಿಸಿತ್ತು.
ಚೀನಾ ವಿರೋಧಿ ಹೋರಾಟ ಉದ್ರಿಕ್ತ ಸ್ವರೂಪ ತಾಳಿದ್ದರಿಂದ ಟಿಬೆಟಿಯನ್ನರು ಚೀನಾದ ನಾಗರಿಕರು, ಅಂಗಡಿಗಳು ಮತ್ತು ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡಿದ್ದರು. ಆದರೆ ಅದರಾಚೆ ನಡೆದ ಘಟನೆಗಳ ವಿವರಗಳ ಬಗ್ಗೆ ಸರ್ಕಾರ ನೀಡಿದ ಹೇಳಿಕೆಗಳು ಮತ್ತು ಟಿಬೆಟಿಯನ್ನರ ಹೇಳಿಕೆಗಳು ಪರಸ್ಪರ ವೈರುದ್ಧ್ಯದಿಂದ ಕೂಡಿವೆ. ಗಲಭೆಕೋರರು 18 ನಾಗರಿಕರನ್ನು ಮತ್ತು ಪೊಲೀಸನನ್ನು ಕೊಂದಿದ್ದಾರೆಂದು ಚೀನಾ ಸರ್ಕಾರ ಹೇಳುತ್ತಿದೆ. ಆದರೆ ಚೀನಾದ ಭದ್ರತಾ ಪಡೆಗಳು 200 ಟಿಬೆಟಿಯನ್ನರನ್ನು ಕೊಂದಿರುವುದಾಗಿ ದೇಶಭ್ರಷ್ಟವಾದ ಟಿಬೆಟ್ ಸರ್ಕಾರ ಹೇಳಿದೆ. |