ತಾಲಿಬಾನ್ ಉಗ್ರರು ಪಾಕಿಸ್ತಾನದ ಸ್ವಾತ್ ಪ್ರಾಂತ್ಯದಲ್ಲಿ ನಡೆಸುತ್ತಿರುವ ಅಟ್ಟಹಾಸ ಇಸ್ಲಾಮಾಬಾದ್‌ಗೂ ವಿಸ್ತರಿಸಲಿದೆ. ತಮ್ಮ ಪ್ರಭಾವವನ್ನು ದೇಶದ ರಾಜಧಾನಿಯಲ್ಲೂ ತೋರಿಸಲಿದ್ದೇವೆ ಎಂದು ಉಗ್ರಗಾಮಿ ಸಂಘಟನೆಯ ಕಮಾಂಡರ್ ತಿಳಿಸಿದ್ದಾನೆ.
ಈಗಾಗಲೇ ಇಸ್ಲಾಮಾಬಾದ್‌ಗೆ 100 ಕಿಲೋ ಮೀಟರ್ ಸಮೀಪದ ಬನೇರ್‌ನಲ್ಲಿಯ ಎರಡು ಗ್ರಾಮಗಳನ್ನು ಸುಮಾರು 400ರಿಂದ 500ರಷ್ಟಿರುವ ಸ್ವಾತ್ ತಾಲಿಬಾನ್ ಉಗ್ರರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಟೀವಿ ವಾಹಿನಿಗಳು ವರದಿ ಮಾಡಿವೆ.
ಬುಡಕಟ್ಟು ಮುಖಂಡರು ಬನೇರ್ ಗ್ರಾಮವನ್ನು ತೊರೆಯುವಂತೆ ತಾಲಿಬಾನ್‌ಗಳಿಗೆ ಒತ್ತಡ ಹೇರುತ್ತಿದ್ದಾರೆ. ಆದಾಗ್ಯೂ ಗ್ರಾಮವನ್ನು ತೊರೆಯದಂತೆ ತನ್ನ ಸಹಚರರಿಗೆ ಸೂಚಿಸಿರುವುದಾಗಿ ಸ್ವಾತ್ ಪ್ರಾಂತ್ಯದ ತಾಲಿಬಾನ್ ಮುಖ್ಯಸ್ಥ ಮೌಲಾನಾ ಫಾಜ್ಲುಲ್ಲಾಹ್ ತಿಳಿಸಿದ್ದಾನೆಂದು ತಾಲಿಬಾನ್ ಕಮಾಂಡರ್ ರಿಜ್ವಾನ್ ಬಾಚಾ 'ಡಾನ್' ವಾರ್ತಾವಾಹಿನಿಗೆ ಮಾಹಿತಿ ನೀಡಿದ್ದಾನೆ.
ಬನೇರ್ ಗ್ರಾಮದಲ್ಲಿ ಯುದ್ಧವಿರಾಮ ಘೋಷಿಸಲು ತಾಲಿಬಾನ್ ಮತ್ತು ಬುಡಕಟ್ಟು ನಾಯಕರು ಒಪ್ಪಿಕೊಂಡ ಬಳಿಕ ಎರಡೂ ಗುಂಪುಗಳ ನಡುವೆ ಧಾರ್ಮಿಕ ಮುಖಂಡರು ಮಾತುಕತೆ ನಡೆಸುತ್ತಿದ್ದಾರೆ. ಈ ಗ್ರಾಮಕ್ಕೆ ತಾಬಿಬಾನ್ ಕಾಲಿಟ್ಟ ನಂತರ ಮೂವರು ಪೊಲೀಸರು ಹಾಗೂ 10ಕ್ಕೂ ಹೆಚ್ಚು ಉಗ್ರರು ಘರ್ಷಣೆಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಅದೇ ಹೊತ್ತಿಗೆ ಇಸ್ಲಾಮಾಬಾದನ್ನು ಮುಜಾಹಿದ್ದೀನ್‌ಗಳ ವಶಕ್ಕೆ ತೆಗೆದುಕೊಳ್ಳುವ ದಿನಗಳು ತುಂಬಾ ದೂರವಿಲ್ಲ ಎಂದು ಆಲ್-ಖೈದಾ ಮಾಧ್ಯಮ ಮುಖ್ಯಸ್ಥ ಆಲ್-ಸಹಾಬ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾನೆ.
|