ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಉಗ್ರರು ಬೆದರಿಕೆ ಹಾಕಿರುವ ಹಿನ್ನಲೆಯಲ್ಲಿ ಅಮೆರಿಕಾ ರಾಯಭಾರ ಕಚೇರಿ ಹಾಗೂ ಎಲ್ಲಾ ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ. ಗುಡ್ ಫ್ರೈಡೇ ಹಿನ್ನಲೆಯಲ್ಲಿ ಉಗ್ರಗಾಮಿಗಳು ರಾಜಧಾನಿಗೆ ಆತ್ಮಹತ್ಯಾ ದಾಳಿ ನಡೆಸಲಿದ್ದಾರೆ ಎಂದು ಗುಪ್ತದಳಗಳು ಮಾಹಿತಿ ನೀಡಿದ್ದ ಕಾರಣ ಈ ಬೆಳವಣಿಗೆಗಳು ಕಂಡು ಬಂದಿವೆ.
ಪ್ರಮುಖ ನಗರಗಳಾದ ರಾವಲ್ಪಿಂಡಿ, ಲಾಹೋರ್‌ಗಳ ಮೂಲಕ ಡಜನ್‌ಗಳಷ್ಟು ಆತ್ಮಹತ್ಯಾ ಬಾಂಬರುಗಳು ಈಗಾಗಲೇ ನೆಲೆ ಪಡೆದುಕೊಂಡಿದ್ದು ರಾಜಧಾನಿಗೆ ದಾಲಿ ನಡೆಸಬಹುದು ಎಂದು ಗುಪ್ತದಳಗಳು ಮಾಹಿತಿ ನೀಡಿದ್ ಹಿನ್ನಲೆಯಲ್ಲಿ ದೇಶದಾದ್ಯಂತ ಮುನ್ನೆಚ್ಚೆರಿಕೆ ಘೋಷಿಸಲಾಗಿದೆ.
ಬೈತುಲ್ಲಾಹ್ ಮಸೂದ್ ಎಂಬವನ ಕಡೆಯಿಂದ ನಾಲ್ವರು ಭಯೋತ್ಪಾದಕರು ಇಸ್ಲಾಮಾಬಾದ್‌ನಲ್ಲೇ ಇದ್ದಾರೆ. ಅವರು ಆತ್ಮಹತ್ಯಾ ದಾಳಿಗಳನ್ನು ನಡೆಸಬಹುದು ಎಂದು ಪಾಕಿಸ್ತಾನ ಮಾಧ್ಯಮಗಳೂ ವರದಿ ಮಾಡಿವೆ.
ಇಸ್ಲಾಮಾಬಾದ್‌ನಲ್ಲಿನ ಅಮೆರಿಕಾ ರಾಯಭಾರ ಕಚೇರಿಯನ್ನು ಮುಚ್ಚಲಾಗಿದ್ದರೂ ಕರಾಚಿ, ಲಾಹೋರ್ ಮತ್ತು ಪೇಶಾವರಗಳಲ್ಲಿನ ಧೂತವಾಸಗಳು ಎಂದಿನಂತೆ ಕಾರ್ಯಾಚರಿಸುತ್ತಿವೆ. ಇಸ್ಲಾಮಾಬಾದ್ ಕಚೇರಿ ಸೋಮವಾರದಿಂದ ಎಂದಿನಂತೆ ತೆರೆಯಲಿದೆ ಎಂದೂ ವರದಿಗಳು ತಿಳಿಸಿವೆ.
ಮಾಮೂಲಿ ವ್ಯವಹಾರಗಳು, ಪಾಕಿಸ್ತಾನದ ನಾಗರಿಕರಿಗೆ ವಿಸಾ ಒದಗಿಸುವುದು ಮುಂತಾದುವುಗಳು ಇಂದು ಅಲಭ್ಯ. ಆದರೆ ಅಮೆರಿಕನ್ನರಿಗೆ ತುರ್ತು ಸೇವೆಯನ್ನೊದಗಿಸಲು ರಾಯಭಾರ ಕಚೇರಿ ಲಭ್ಯವಿರುತ್ತದೆ ಎಂದು ಅಮೆರಿಕಾ ರಾಯಭಾರ ಕಚೇರಿಯ ಲ್ಯೂ ಫಿಂಟರ್ ತಿಳಿಸಿದ್ದಾರೆ. ಅಲ್ಲದೆ ಅಮೆರಿಕಾ ಪ್ರಜೆಗಳು ರಾಜಧಾನಿಯಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಅಮೆರಿಕಾ ರಾಯಭಾರ ಕಚೇರಿಯಲ್ಲದೆ ಇನ್ನಿತರ ಅಂತಾರಾಷ್ಟ್ರೀಯ ಸಂಘಟನೆಗಳ ಇಸ್ಲಾಮಾಬಾದ್ ಕಚೇರಿಗಳು ಕೂಡ ಇಂದು ತೆರೆದಿರುವುದಿಲ್ಲ. ಭದ್ರತಾ ಬೆದರಿಕೆಗಳ ಕಾರಣ ಈ ಬೆಳವಣಿಗೆ ಕಂಡು ಬಂದಿದೆ.
|