ಕಳೆದ ತಿಂಗಳು ಶ್ರೀಲಂಕಾ ಕ್ರಿಕೆಟಿಗರ ಮೇಲೆ ಲಾಹೋರ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಭಾರತದ ಕೈವಾಡವಿದೆ ಎಂದು ಮತ್ತೊಮ್ಮೆ ಪಾಕಿಸ್ತಾನ ಹೇಳಿಕೊಂಡಿದೆ. ಅದಕ್ಕಾಗಿ ತನ್ನಲ್ಲಿ ಅಗತ್ಯ ಸಾಕ್ಷ್ಯಗಳಿವೆ ಎಂದಿರುವ ಪಾಕ್ ಪೊಲೀಸರು ಯಾವುದೇ ವಿವರಗಳನ್ನು ಬಹಿರಂಗಗೊಳಿಸಿಲ್ಲ.
ಶುಕ್ರವಾರ ಲಾಹೋರ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪೊಲೀಸರು ಈ ವಿಚಾರ ತಿಳಿಸಿದ್ದಾರೆ. ಮಾರ್ಚ್ 3ರಂದು ನಡೆದ ಲಾಹೋರ್ ದಾಳಿಯಲ್ಲಿ ಭಾರತದ ಕೈವಾಡವಿರುವುದಕ್ಕೆ ನಮ್ಮಲ್ಲಿ ಪ್ರಬಲ ಸಾಕ್ಷ್ಯಗಳಿವೆ. ಆದರೆ ತನಿಖೆ ನಡೆಯುತ್ತಿರುವ ಕಾರಣ ಯಾವುದೇ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆಂದು ಟೀವಿ ವಾಹಿನಿಯೊಂದು ವರದಿ ಮಾಡಿದೆ.
ಘಟನೆ ನಡೆದ ವಾರದ ನಂತರ ಶ್ರೀಲಂಕಾ ವಿದೇಶಾಂಗ ಸಚಿವ ರೋಹಿತ ಬೊಗೊಲ್ಲಾಗಾಮ ಭಾರತ ಕೈವಾಡವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದರು. ಲಾಹೋರ್‌ನಲ್ಲಿ ನಮ್ಮ ಆಟಗಾರರ ಮೇಲೆ ನಡೆದ ದಾಳಿಯಲ್ಲಿ ಭಾರತದ ಪಾಲುದಾರಿಕೆಯಿಲ್ಲ. ಅವರು ಭಯೋತ್ಪಾದನೆಯ ವಿರುದ್ಧ ಹೋರಾಡಲು ನಮಗೆ ಸಹಕಾರ ನೀಡುತ್ತಿದ್ದಾರೆ. ಇದನ್ನು ಪಾಕಿಸ್ತಾನಕ್ಕೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದರು. ಈ ಹೇಳಿಕೆಯ ನಂತರವೂ ಪಾಕಿಸ್ತಾನ ಮತ್ತೆ ಭಾರತದತ್ತ ತನ್ನ ಕೆಂಗಣ್ಣು ಬೀರಿದೆ.
ಟೆಸ್ಟ್ ಆಡಲು ಗಡ್ಡಾಫಿ ಸ್ಟೇಡಿಯಮ್‌ಗೆ ತೆರಳುತ್ತಿದ್ದಾಗ ದಾರಿ ಮಧ್ಯೆ ಬಂದೂಕುದಾರಿ ಉಗ್ರರು ಕ್ರಿಕೆಟಿಗರು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಗುಂಡಿನ ಮಳೆಗರೆದಿದ್ದರು. ಈ ಘಟನೆಯಲ್ಲಿ ಆರು ಮಂದಿ ಪಾಕಿಸ್ತಾನೀಯರು ಮೃತಪಟ್ಟಿದ್ದರು. ಏಳಕ್ಕೂ ಹೆಚ್ಚು ಮಂದಿ ಲಂಕಾ ಕ್ರಿಕೆಟಿಗರು ಹಾಗೂ ಕ್ರಿಕೆಟ್ ಅಧಿಕಾರಿಗಳು ಗಾಯಗೊಂಡಿದ್ದರು. ಆಟಗಾರರಿಗೆ ಹೆಚ್ಚಿನ ಭದ್ರತೆ ನೀಡಲಾಗಿರಲಿಲ್ಲ ಎಂದು ಹಲವೆಡೆಯಿಂದ ಆರೋಪಗಳು ಕೇಳಿ ಬಂದಿದ್ದವು.
ಲಾಹೋರ್ ಘಟನೆ ಮಾತ್ರವಲ್ಲ. ದೇಶದಲ್ಲಿ ನಡೆಯುತ್ತಿರುವ ಇತರ ದುರ್ಘಟನೆಗಳಲ್ಲೂ ವಿದೇಶಗಳ ಕೈವಾಡವಿದೆ ಎಂದು ಆರೋಪಿಸಿರುವ ಪೊಲೀಸರು ಮಾರ್ಚ್ 23ರಂದು ಮನಾವನ್ ಪೊಲೀಸ್ ಅಕಾಡೆಮಿ ಮೇಲೆ ದಾಳಿ ನಡೆಸಿ 28 ಮಂದಿ ತರಬೇತಿ ಪಡೆಯುತ್ತಿದ್ದವರನ್ನು ಹತ್ಯೆಗೈದ ಪ್ರಕರಣಕ್ಕೂ ತಾಳೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ನಾಲ್ಕು ಮಂದಿ ಭಯೋತ್ಪಾದಕರನ್ನು ಸ್ಥಳದಲ್ಲಿಯೇ ಹತ್ಯೆಗೈಯಲಾಗಿತ್ತು. ಆರು ಮಂದಿಯನ್ನು ಜೀವಂತ ಸೆರೆ ಹಿಡಿಯಲಾಗಿದ್ದು, ಒಬ್ಬನ ಕೈಯಿಂದ ಅಫಘಾನಿಸ್ತಾನ ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಗೆ ತಾನೇ ಕಾರಣ ಎಂದು ದಾಳಿಯ ನಂತರ ಪಾಕಿಸ್ತಾನದ ತಾಲಿಬಾನ್ ಸಂಘಟನೆ ಹೇಳಿಕೊಂಡಿತ್ತು.
|