ಲಾಹೋರ್‌ನಲ್ಲಿ ಇತ್ತೀಚೆಗೆ ಪೊಲೀಸ್ ಅಕಾಡೆಮಿ ಮೇಲೆ ಮಾರಕ ದಾಳಿಗಳಿಗೆ ಹೊಣೆ ಹೊತ್ತ ತಾಲಿಬಾನ್ ಮುಖಂಡ ಬೈತುಲ್ಲಾ ಮೆಹಸೂದ್ ಐಎಸ್‌ಐ ಜತೆ ಸಖ್ಯ ಹೊಂದಿರುವ ವಿಷಯ ಬಯಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ಕಳೆದ ಎರಡು ವರ್ಷಗಳಲ್ಲಿ ಮೆಹಸೂದ್‌ಗೆ ಐಎಸ್‌ಐ ಸುಳಿವು ನೀಡುವ ಮೂಲಕ ಸೆರೆಸಿಕ್ಕುವ ಅಥವಾ ಹತ್ಯೆಯ ಪ್ರಯತ್ನಗಳಿಂದ ತಪ್ಪಿಸಿಕೊಳ್ಳಲು ನೆರವಾಗಿತ್ತೆಂದು ನ್ಯೂಸ್‌ವೀಕ್ ವರದಿ ಮಾಡಿದೆ.
ಮೆಹಸೂದ್ ಮಾಜಿ ಪ್ರಧಾನಮಂತ್ರಿ ಬೆನಜೀರ್ ಭುಟ್ಟೊ ಅವರ ಹತ್ಯಾಕಾಂಡದಲ್ಲಿ ಕೈವಾಡ ನಡೆಸಿದ್ದನೆಂದು ಶಂಕಿಸಲಾಗಿದ್ದು, ಅವನನ್ನು ಜೀವಂತ ಸೆರೆಹಿಡಿಯಲು ಅಥವಾ ಹತ್ಯೆ ಮಾಡಲು ಪಾಕಿಸ್ತಾನ ಭದ್ರತಾ ಪಡೆಗಳು ಅನೇಕ ಬಾರಿ ಕಾರ್ಯಾಚರಣೆಗಳನ್ನು ನಡೆಸಿತ್ತು. ಆದರೆ ಪ್ರತಿಬಾರಿಯೂ ಅವನು ಅಪಾಯದಿಂದ ಪಾರಾಗುತ್ತಿದ್ದ.
ತೆಹ್ರಿಕ್-ಎ-ತಾಲಿಬಾನ್ ಗುಂಪಿನ ಮುಖಂಡನಾಗಿರುವ ಮೆಹಸೂದ್, 2007ರ ಕೊನೆಯಲ್ಲಿ ಉಗ್ರಗಾಮಿಗಳ ಅತ್ಯಂತ ಮಹತ್ವಾಕಾಂಕ್ಷಿ ನಾಯಕನೆಂದು ಸ್ವತಃ ಹೆಸರು ಗಳಿಸಿದ್ದ. ಮೆಹಸೂದ್‌ಗೆ ಐಎಸ್‌ಐ ಒಳಗೆ ಸಂಪರ್ಕವಿತ್ತೆಂದು ವಾಷಿಂಗ್ಟನ್ ಮತ್ತು ಇಸ್ಲಾಮಾಬಾದ್ ಅಧಿಕಾರಿಗಳು ಶಂಕಿಸಿದ್ದಾರೆಂದು ಇಬ್ಬರು ಭಯೋತ್ಪಾದನೆ ನಿಗ್ರಹ ತಜ್ಞರು ಹೇಳಿದ್ದಾರೆ. ಮೆಹಸೂದ್ ಸಂಪರ್ಕ ಹೊಂದಿದ ಐಎಸ್‌ಐ ವ್ಯಕ್ತಿಗಳು ಪಾಕಿಸ್ತಾನ ಪಡೆಗಳು ಆಕ್ರಮಣ ಮಾಡುವ ಮುನ್ನವೇ ಅದರ ಬಗ್ಗೆ ಸುಳಿವು ನೀಡಿ ತಪ್ಪಿಸಿಕೊಳ್ಳಲು ನೆರವಾಗುತ್ತಿದ್ದರೆಂದು ನ್ಯೂಸ್‌ವೀಕ್ ವರದಿ ಮಾಡಿದೆ. |