ತಮಿಳು ವ್ಯಾಘ್ರಗಳ ವಿರುದ್ಧ ತಮ್ಮ ಕಾರ್ಯಾಚರಣೆಯ ಕೊನೆ ಹಂತ ಮುಟ್ಟಿರುವ ಶ್ರೀಲಂಕಾ ಪಡೆಗಳು ಉತ್ತರದಲ್ಲಿ ಗುಂಡು ಹಾರಿಸದ ವಲಯಕ್ಕೆ ಪ್ರವೇಶಿಸಿರುವುದಾಗಿ ರಾಜ್ಯಸ್ವಾಮ್ಯದ ರೇಡಿಯೊ ಶನಿವಾರ ವರದಿ ಮಾಡಿದೆ. ಸೇನೆಯ 58ನೇ ವಿಭಾಗವು ಬ್ರಿಗೇಡಿಯರ್ ಶವೇಂದ್ರ ಸಿಲ್ವಾ ನೇತೃತ್ವದಲ್ಲಿ ಪುಟ್ಟುಮಟಾಲನ್ ನೋ ಫೈರ್ ಝೋನ್ ಪ್ರದೇಶದೊಳಕ್ಕೆ ಶುಕ್ರವಾರ ಸಂಜೆ ಪ್ರವೇಶಿಸಿವೆ ಎಂದು ಶ್ರೀಲಂಕಾ ಪ್ರಸಾರ ನಿಗಮ ತಿಳಿಸಿದೆ.
ಆದರೆ ಸೇನಾಪಡೆ ಗುಂಡು ಹಾರಿಸದಿರುವ ಪ್ರದೇಶದೊಳಕ್ಕೆ ಪ್ರವೇಶ ಮಾಡಿರುವ ವರದಿ ಮಿಲಿಟರಿಯಿಂದ ಅಧಿಕೃತವಾಗಿ ದೃಢಪಟ್ಟಿಲ್ಲ. ಎಲ್‌ಟಿಟಿಇ ಬಂಡುಕೋರರಿಗೆ ಶರಣಾಗುವಂತೆ ಮತ್ತು ನಾಗರಿಕರು ಸುರಕ್ಷಿತವಾಗಿ ಪಾರಾಗಲು ಅವಕಾಶ ಕಲ್ಪಿಸುವಂತೆ ಸರ್ಕಾರ ಅಂತಿಮ ಸೂಚನೆ ನೀಡಿದ ಬಳಿಕ ಸೇನೆಯ 58, 53, 59 ಮತ್ತು ಕಾರ್ಯಪಡೆಯ 8 ವಿಭಾಗಗಳು ಬುಧವಾರದಿಂದ ಆ ಪ್ರದೇಶವನ್ನು ಸುತ್ತುವರಿದಿವೆ.
ಸರ್ಕಾರದ ನಿಯಂತ್ರಣದಡಿ ಸುರಕ್ಷಿತವಾಗಿ ತೆರಳುವ ನಾಗರಿಕರತ್ತ ಬಂಡುಕೋರರು ಗುಂಡುಹಾರಿಸಿದ್ದಾರೆ. ಸುಮಾರು 66,000 ನಾಗರಿಕರು ಸರ್ಕಾರಿ ಅಭಿವೃದ್ಧಿ ಕೇಂದ್ರಗಳಿಗೆ ಈಗಾಗಲೇ ಆಗಮಿಸಿದ್ದು, ಇನ್ನೂ ಹೆಚ್ಚು ಜನರು ಬರುವರೆಂದು ನಿರೀಕ್ಷಿಸಲಾಗಿದೆ. ಒಂದೊಮ್ಮೆ ನಾಗರಿಕರು ಆ ಪ್ರದೇಶದಿಂದ ತೆರಳಿದರೆ, ಪುಟ್ಟುಮಟಾಲನ್‌ನ ಇಡೀ ಪ್ರದೇಶವನ್ನು ಬಂಡುಕೋರರಿಂದ ಮುಕ್ತಗೊಳಿಸಿ, ಮೂರು ದಶಕಗಳ ಕಾಲದ ಪ್ರತ್ಯೇಕತಾವಾದಿ ಹೋರಾಟಕ್ಕೆ ತೆರೆಎಳೆಯುವುದಾಗಿ ಮಿಲಿಟರಿ ತಿಳಿಸಿದೆ.
|