ಉತ್ತರ ಇರಾಕ್‌ನಲ್ಲಿ ಪೊಲೀಸ್ ಮುಖ್ಯಕಚೇರಿಯ ಸುತ್ತ ಉಸುಕಿನ ಚೀಲ ಹಾಕಿದ್ದ ಗೋಡೆಗೆ ಆತ್ಮಾಹುತಿ ಬಾಂಬರ್ ಸ್ಫೋಟಕಗಳನ್ನು ತುಂಬಿದ್ದ ಟ್ರಕ್ ಡಿಕ್ಕಿ ಹೊಡೆಸಿದ್ದರಿಂದ ಐವರು ಅಮೆರಿಕ ಸೈನಿಕರು ಮತ್ತು ಇಬ್ಬರು ಇರಾಕಿ ಪೊಲೀಸರು ಹತರಾಗಿದ್ದಾರೆ. ಒಂದು ವರ್ಷಕ್ಕಿಂತ ಹೆಚ್ಚಿನ ಕಾಲಾವಧಿಯಲ್ಲಿ ನಡೆದ ಮಾರಕ ದಾಳಿಯೆಂದು ಇದನ್ನು ಶಂಕಿಸಲಾಗಿದೆ.
ವಾಯವ್ಯ ಮೊಸುಲ್‌ನ ಪೊಲೀಸ್ ಮುಖ್ಯಕಚೇರಿ ಬಳಿ ಈ ಘಟನೆ ನಡೆದಿದ್ದು, ಆರನೇ ಅಮೆರಿಕ ಸೈನಿಕ ಮತ್ತು 17 ಇರಾಕಿ ಪೊಲೀಸರು ಸ್ಫೋಟದಲ್ಲಿ ಗಾಯಗೊಂಡಿದ್ದಾರೆ. ವಾಸ್ತವವಾಗಿ ಆತ್ಮಾಹುತಿ ಬಾಂಬರ್ ಗುರಿಯಿರಿಸಿದ್ದು, ಮೊಸುಲ್‌ನಲ್ಲಿರುವ ಇರಾಕಿ ಪೊಲೀಸ್ ಸಂಕೀರ್ಣ. ಆದರೆ ಆಕಸ್ಮಿಕವಾಗಿ ಅಮೆರಿಕದ ಗಸ್ತುಪಡೆ ಯೋಧರು ಸ್ಫೋಟಕ್ಕೆ ಬಲಿಯಾದರೆಂದು ಲೆ.ಕರ್ನಲ್ ಮೈಕಲ್ ಸ್ಟಾರ್ಟ್ ತಿಳಿಸಿದ್ದಾರೆ.
ಆತ್ಮಾಹುತಿ ದಾಳಿ ಮಾಡುವ ಸಂದರ್ಭದಲ್ಲೇ ಅಮೆರಿಕದ ಪಡೆಗಳು ಅದೇ ಬೀದಿಗೆ ಆಕಸ್ಮಿಕವಾಗಿ ಬಂದಿದ್ದು ದುರ್ಘಟನೆಗೆ ಕಾರಣವಾಯಿತು ಎಂದು ಸ್ಟಾರ್ಟ್ ಹೇಳಿದ್ದಾರೆ. ಟ್ರಕ್ ತುಂಬ ಸ್ಫೋಟಕ ತುಂಬಿದ್ದ ಆತ್ಮಾಹುತಿ ಬಾಂಬರ್, ಪೊಲೀಸ್ ಸಂಕೀರ್ಣ ಸಮೀಪಿಸುತ್ತಿದ್ದಂತೆ ಕಡಿದಾದ ತಿರುವು ಪಡೆದು ಕಬ್ಬಿಣದ ತಡೆಗೋಡೆಗೆ ಟ್ರಕ್ ಡಿಕ್ಕಿ ಹೊಡೆಸಿ ಮುಖ್ಯಕಟ್ಟಡದ ಬಳಿ ವಾಹನವನ್ನು ಸ್ಫೋಟಿಸಿದ ಎಂದು ಇರಾಕಿ ಪೊಲೀಸರು ಹೇಳಿದ್ದಾರೆ. |