ಚೀನಾದಲ್ಲಿ ಗಂಡುಮಕ್ಕಳಿಗೆ ಪ್ರಾಧಾನ್ಯತೆ ನೀಡಿ ಆಯ್ದ ಗರ್ಭಪಾತಗಳ ಮೂಲಕ ಸ್ತ್ರೀಭ್ರೂಣ ಹತ್ಯೆಗೆ ಉತ್ತೇಜನ ನೀಡಿದ್ದರಿಂದ ಇಂದು ಬಾಲಕಿಯರಿಗಿಂತ ಬಾಲಕರ ಸಂಖ್ಯೆ 32 ದಶಲಕ್ಷ ಹೆಚ್ಚಾಗಿದೆ. ಇದರಿಂದ ಪುರುಷರು ಮತ್ತು ಮಹಿಳೆಯರ ಜನಸಂಖ್ಯೆ ಪ್ರಮಾಣದಲ್ಲಿ ಅಸಮತೋಲನ ಉಂಟಾಗಿ ಇನ್ನೂ ಅನೇಕ ದಶಕಗಳವರೆಗೆ ಈ ಅಸಮತೋಲನ ಹಾಗೇ ಉಳಿಯಲಿದೆ ಎಂದು ಶುಕ್ರವಾರ ಬಿಡುಗಡೆಯಾದ ತನಿಖಾ ವರದಿ ಮಾಹಿತಿ ನೀಡಿದೆ.
ಚೀನಾದಲ್ಲಿ ಗಂಡು ಮಕ್ಕಳ ಉತ್ತರಾಧಿಕಾರದ ಬಗ್ಗೆ ಮೋಹವು ಕಹಿ ಫಲವನ್ನು ನೀಡುತ್ತಿದ್ದು, ಪ್ರಾಪ್ತವಯಸ್ಕನಾದ ಯುವಕ ವಧುವಿಗಾಗಿ ಪರದಾಡುವ ಸ್ಥಿತಿ ಬಂದಿದೆ ಎಂಬ ತಜ್ಞರ ಭವಿಷ್ಯಕ್ಕೆ ಈ ತನಿಖೆಯಿಂದ ಒಳ್ಳೆಯ ಅಸ್ತ್ರ ಸಿಕ್ಕಿದಂತಾಗಿದೆ. ಕೆಲವು ಕಾಲ್ಪನಿಕ ಪರಿಹಾರಗಳನ್ನು ಸಲಹೆ ಮಾಡಲಾಗಿದ್ದರೂ ಹೆಚ್ಚುವರಿ ಪುರುಷರ ಸಂತತಿಯನ್ನು ತಡೆಯುವುದು ಸಾಧ್ಯವಾಗದ ಮಾತು ಎಂದು ಬ್ರಿಟಿಷ್ ಮೆಡಿಕಲ್ ಜರ್ನಲ್‌ನ ಆನ್‌ಲೈನ್ ಪ್ರಕಟಣೆ ತಿಳಿಸಿದೆ.
ಬಹುತೇಕ ರಾಷ್ಟ್ರಗಳಲ್ಲಿ ಪ್ರತಿ 100 ಹೆಣ್ಣುಮಕ್ಕಳ ಜನನಕ್ಕೆ ಪ್ರತಿಯಾಗಿ 103ರಿಂದ 107 ಗಂಡುಮಕ್ಕಳು ಜನಿಸುತ್ತಿದ್ದು, ಪುರುಷ ಸಂತತಿಯು ಮಹಿಳಾ ಸಂತತಿಯನ್ನು ಹಿಂದಿಕ್ಕಿದೆ. ಆದರೆ ಚೀನಾದಲ್ಲಿ ಅಗ್ಗದ ಲಿಂಗಗುರುತಿಸುವಿಕೆ ಮತ್ತು ಗರ್ಭಪಾತದ ಲಭ್ಯತೆಯಿಂದ ಗಂಡುಮಕ್ಕಳಿಗೆ ಸಾಂಪ್ರದಾಯಿಕ ಆದ್ಯತೆಯು ಹೆಚ್ಚಳವಾಗಿದೆ.
ಇಂದು ಚೀನಾ ದಂಪತಿ ಹೆಣ್ಣುಮಗುವಿನ ಜನನ ತಡೆಯಲು ಗರ್ಭಪಾತಕ್ಕೆ ಮೊರೆಹೋಗುತ್ತಿದ್ದು, ಈ ಪದ್ಧತಿಯನ್ನು ಅಕ್ರಮವೆಂದು ಅಧಿಕೃತವಾಗಿ ಖಂಡಿಸಲಾಗಿದೆ. ಒಂದೇ ಮಗು ನೀತಿ ಕೂಡ ಚೀನಾದಲ್ಲಿ ಹೆಚ್ಚುವರಿ ಅಂಶವಾಗಿದೆ. ಎರಡನೇ ಮಗು ಹೊಂದಿದ ಪೋಷಕರು ದಂಡ ಕಟ್ಟಬೇಕಾಗಿದ್ದು, ಮಗುವಿನ ಶಿಕ್ಷಣಕ್ಕೆ ಪೋಷಕರೇ ಕೊಡುಗೆ ನೀಡಬೇಕಿದೆ. |