ಯೋಜಿತ ಭಾರಜಲ ಪರಮಾಣು ಸ್ಥಾವರಕ್ಕಾಗಿ ಯುರೇನಿಯಂ ಇಂಧನ ತಯಾರಿಸುವ ಹೊಸ ಘಟಕವನ್ನು ಇರಾನ್ ಅಧ್ಯಕ್ಷ ಮಹಮದ್ ಅಹಮದಿನೆಜಾದ್ ಉದ್ಘಾಟಿಸಿದರು. ಈ ಸ್ಥಾವರವನ್ನು ಪರಮಾಣು ಅಸ್ತ್ರ ತಯಾರಿಕೆಗೆ ಇರಾನ್ ಬಳಸಬಹುದೆಂದು ಪಾಶ್ಚಿಮಾತ್ಯ ರಾಷ್ಟ್ರಗಳು ಶಂಕಿಸಿವೆ. ಇಸ್ಫಾಹನ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಅಧ್ಯಕ್ಷ ಅಹ್ಮದಿ ನೆಜಾದ್ ಘಟಕಕ್ಕೆ ಚಾಲನೆ ನೀಡಿದರು.
ಭಾರಜಲ ಸಂಶೋಧಕ ಸ್ಥಾವರಕ್ಕೆ ಇಂಧನವಾಗಿ ಈ ಘಟಕವು ಯುರೇನಿಯಂ ಆಕ್ಸೈಡ್ ತಯಾರಿಸಲಿದ್ದು, 2009 ಅಥವಾ 2010ರಲ್ಲಿ ಇದು ಮುಗಿಯಲಿದೆ. ಆದರೆ ಇರಾನ್ ತಾನು ಯಾವುದೇ ಅಣ್ವಸ್ತ್ರ ತಯಾರಿಸುವ ಇಚ್ಛೆ ಹೊಂದಿರುವುದನ್ನು ನಿರಾಕರಿಸಿದೆ. ಇರಾನ್ ಭಾರಜಲ ಸ್ಥಾವರದಿಂದ ಖರ್ಚಾದ ಇಂಧನವನ್ನು ಪ್ಲುಟೋನಿಯಂಗೆ ಮರುಸಂಸ್ಕರಣೆ ಮಾಡಿ ಅಣ್ವಸ್ತ್ರ ಸಿಡಿತಲೆ ನಿರ್ಮಿಸಬಹುದೆಂದು ಅಮೆರಿಕ ಮತ್ತು ಮಿತ್ರಪಕ್ಷಗಳು ಆತಂಕ ವ್ಯಕ್ತಪಡಿಸಿವೆ.
ಈ ಪ್ರಕ್ರಿಯೆಯು ಯುರೇನಿಯಂ ಸಂಸ್ಕರಣೆಗಿಂತ ವಿಶಿಷ್ಠವಾಗಿದ್ದು, ಹಗುರಜಲ ಸ್ಥಾವರಕ್ಕೆ ಇಂಧನವನ್ನು ತಯಾರಿಸುತ್ತದೆ. ತೀವ್ರ ಸಂಸ್ಕರಿತ ಯುರೇನಿಯಂ ಇಂಧನವನ್ನು ಸಿಡಿತಲೆ ನಿರ್ಮಾಣಕ್ಕೆ ಕೂಡ ಬಳಸಬಹುದು. ಇರಾನ್ ಸಂಸ್ಕರಣೆ ಕಾರ್ಯಕ್ರಮವು ಸುಧಾರಿತವಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ತಲೆನೋವಾಗಿದೆ. |