ತಮಿಳು ವ್ಯಾಘ್ರ ಬಂಡುಕೋರರ ಜತೆ ಶ್ರೀಲಂಕಾ ಪಡೆಗಳ ಹೋರಾಟದಲ್ಲಿ ಸಿಕ್ಕಿಬಿದ್ದಿರುವ ಸಾವಿರಾರು ನಾಗರಿಕರ ಪ್ರಾಣರಕ್ಷಣೆ ಮಾಡುವಂತೆ ಅಮೆರಿಕಕ್ಕೆ ಭೇಟಿ ನೀಡಿರುವ ಶ್ರೀಲಂಕಾ ಅಧಿಕಾರಿಗೆ ಅಮೆರಿಕ ಒತ್ತಾಯಿಸಿದೆ. ವಿದೇಶಾಂಗ ಕಾರ್ಯದರ್ಶಿ ಪಾಲಿತಾ ಕೊಹೋನಾ ರಿಚರ್ಡ್ ಬೋಚರ್ ಜತೆ ವಾಷಿಂಗ್ಟನ್‌ನಲ್ಲಿ ಮಾತುಕತೆ ವೇಳೆಯಲ್ಲಿ ಬೋಚರ್ ಈ ಪ್ರಸ್ತಾಪ ಮಾಡಿದರು.
ಶ್ರೀಲಂಕಾದ ಗುಂಡುಹಾರಿಸದ ಪ್ರದೇಶದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರ ಸಂಕಷ್ಟಗಳ ಬಗ್ಗೆ ತಮ್ಮ ಕಳವಳವನ್ನು ಪುನರುಚ್ಚರಿಸಿದ ಬೋಚರ್ ವಿದೇಶಾಂಗ ಕಾರ್ಯದರ್ಶಿ ಕೊಹೋನಾ ಅವರಿಗೆ ನಾಗರಿಕರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರೆಂದು ವಿದೇಶಾಂಗ ಇಲಾಖೆಯು ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಸುಮಾರು 1 ಲಕ್ಷ ಜನರು ಸರ್ಕಾರಿ ನಿಯೋಜಿತ ನೋ ಫೈರ್ ಝೋನ್‌ನಲ್ಲಿ ಸಿಕ್ಕಿಬಿದ್ದಿದ್ದು, ಶ್ರೀಲಂಕಾದ ಮಿಲಿಟರಿ ತಮಿಳು ವ್ಯಾಘ್ರಗಳನ್ನು ಸದೆಬಡಿಯಲು ಅತೀ ಸಮೀಪಕ್ಕೆ ತಲುಪಿದೆ.
ಸುರಕ್ಷಿತ ವಲಯದಲ್ಲಿ ನಾಗರಿಕರ ಸಾವುನೋವಿನ ಸಂಖ್ಯೆ ಗಗನಮುಖಿಯಾಗಿದ್ದು, ಸರ್ಕಾರಿ ಪಡೆಗಳು ಸುರಕ್ಷಿತ ವಲಯದೊಳಕ್ಕೆ ಗುಂಡಿನ ದಾಳಿ ನಡೆಸುತ್ತಿದ್ದರೆ, ಬಂಡುಕೋರರು ತಪ್ಪಿಸಿಕೊಳ್ಳುವ ನಾಗರಿಕರತ್ತ ಗುಂಡು ಹಾರಿಸುತ್ತಿದ್ದಾರೆ. |