ಕಡಲ್ಗಳ್ಳರ ಕೈವಶವಾಗಿರುವ ಅಮೆರಿಕದ ಹಡಗಿನ ಕ್ಯಾಪ್ಟನ್ ರಿಚರ್ಡ್ ಫಿಲಿಪ್ಸ್ ಅವರನ್ನು ಬಿಡಿಸಲು ಬಲಪ್ರಯೋಗ ಮಾಡಿದರೆ ವಿನಾಶದ ಪ್ರತಿಫಲ ಎದುರಾಗಬಹುದೆಂದು ಕಡಲ್ಗಳ್ಳರು ಎಚ್ಚರಿಸಿದ್ದಾರೆ. ಅಮೆರಿಕ ಮತ್ತು ಇತರೆ ನೌಕೆಗಳು ಕಡಲ್ಗಳ್ಳರನ್ನು ಬೆನ್ನಟ್ಟಿರುವ ನಡುವೆ, ರಿಚರ್ಡ್ ಅವರನ್ನು ದೊಡ್ಡ ನೌಕೆಯೊಂದಕ್ಕೆ ವರ್ಗಾಯಿಸಲು ಕಡಲ್ಗಳ್ಳರು ಇಚ್ಛಿಸಿದ್ದಾರೆ.
ಸೊಮಾಲಿ ತೀರದಿಂದ ನೂರಾರು ಕಿಮೀ ದೂರದಲ್ಲಿ ಜೀವರಕ್ಷಕ ದೋಣಿಯೊಂದರಲ್ಲಿ ನಾಲ್ವರು ಕಡಲ್ಗಳ್ಳರ ಗ್ಯಾಂಗ್ ಕ್ಯಾಪ್ಟನ್ ಫಿಲಿಪ್ಸ್ ಅವರನ್ನು ಹಿಡಿದಿಟ್ಟಿದೆ. ಫಿಲಿಪ್ಸ್ ಶುಕ್ರವಾರ ಹಾರಿ ತಪ್ಪಿಸಿಕೊಂಡು ಸಮೀಪದ ಅಮೆರಿಕದ ನೌಕೆಯತ್ತ ಧಾವಿಸುವಷ್ಟರಲ್ಲಿ ಅವರನ್ನು ಪುನಃ ಸೆರೆಹಿಡಿಯಲಾಗಿತ್ತು. ಕ್ಯಾಪ್ಟನ್ ಫಿಲಿಪ್ಸ್‌ಗಾದ ಗತಿ ಬಗ್ಗೆ ಅಮೆರಿಕದಲ್ಲಿ ತೀವ್ರ ಆತಂಕ ಮೂಡಿದ್ದು, ಕ್ಯಾಪ್ಟನ್ ಸುರಕ್ಷಿತ ವಾಪಸಾತಿಗೆ ಉನ್ನತ ಆದ್ಯತೆ ನೀಡುವುದಾಗಿ ರಕ್ಷಣಾ ಕಾರ್ಯದರ್ಶಿ ರಾಬರ್ಟ್ ಗೇಟ್ಸ್ ವರದಿಗಾರರಿಗೆ ತಿಳಿಸಿದರು.
ಫಿಲಿಪ್ಸ್ ಬಿಡುಗಡೆಗೆ ಎಫ್‌ಬಿಐ ತಜ್ಞರು ನೆರವು ನೀಡುತ್ತಿದ್ದರೂ, ಈ ಪ್ರಕ್ರಿಯೆಯು ಸುದೀರ್ಘವಾಗಿರುತ್ತದೆಂದು ವಿಶ್ಲೇಷಕರು ತಿಳಿಸಿದ್ದಾರೆ. ಕಡಲ್ಗಳ್ಳರು ಫಿಲಿಪ್ಸ್ ಬಿಡುಗಡೆಗೆ 2 ಮಿಲಿಯ ಡಾಲರ್ ಒತ್ತೆಹಣವನ್ನು ಒತ್ತಾಯಿಸುತ್ತಿದ್ದಾರೆಂದು ಅಮೆರಿಕದಲ್ಲಿ ವರದಿಗಳು ತಿಳಿಸಿವೆ. |