ಸ್ವಾತ್ ಕಣಿವೆಯ ನೆರೆಯಲ್ಲಿರುವ ಬುನೆರ್ ಜಿಲ್ಲೆಯನ್ನು ಬಲಾತ್ಕಾರದಿಂದ ಕೈವಶ ಮಾಡಿಕೊಂಡ ತಾಲಿಬಾನ್ ಉಗ್ರರು, ತಮ್ಮ ಗುಂಪಿಗೆ ಸೇರಲು ಯುವಕರನ್ನು ಆಕರ್ಷಿಸುವುದಕ್ಕಾಗಿ ಮಸೀದಿಗಳನ್ನು ನೇಮಕಾತಿ ಕೇಂದ್ರಗಳಾಗಿ ಮಾಡುತ್ತಿವೆ. ಬುನೇರ್ ಜಿಲ್ಲೆಯಲ್ಲಿರುವ ಬಹುತೇಕ ಎಲ್ಲ ಮಸೀದಿಗಳು ಇಂದು ಷರಿಯತ್ ಅಥವಾ ಇಸ್ಲಾಮಿಕ್ ಕಾನೂನು ಜಾರಿಗೆ ತರುವುದಕ್ಕಾಗಿ ಸ್ಥಳೀಯ ನಿವಾಸಿಗಳನ್ನು ನೇಮಕಾತಿ ಮಾಡಿಕೊಳ್ಳುವ ಕೇಂದ್ರಗಳಾಗಿವೆ.
ಫೆಡರಲ್ ರಾಜಧಾನಿಗೆ ಕೇವಲ 100ಕಿಮೀ ದೂರದ ಬುನೇರ್‌ನಲ್ಲಿ ತಾಲಿಬಾನ್ ಪ್ರವೇಶದಿಂದಾಗಿ ತಾಲಿಬಾನ್ ದುರುದ್ದೇಶದ ಬಗ್ಗೆ ಇಡೀ ಪಾಕಿಸ್ತಾನದಲ್ಲಿ ಅಪಾಯದ ಗಂಟೆ ಮೊಳಗಿದೆ. ತಾಲಿಬಾನ್ ಶಸ್ತ್ರಸಜ್ಜಿತ ಪಾತಕಿಗಳು ಸ್ಥಳೀಯ ಬುಡಕಟ್ಟು ಜನಾಂಗ ಮತ್ತು ಅಧಿಕಾರಿಗಳ ಪ್ರತಿರೋಧವನ್ನು ಲೆಕ್ಕಿಸದೇ ನೆರೆಯ ಸ್ವಾತ್ ಕಣಿವೆಯಿಂದ ಹಿಂಡು ಹಿಂಡಾಗಿ ದಾಳಿ ಮಾಡಿ ಜಿಲ್ಲೆಯ ಮೇಲೆ ನಿಯಂತ್ರಣ ಸಾಧಿಸಿದರು. ಆದರೆ ಕಾನೂನು ಜಾರಿ ಸಂಸ್ಥೆಗಳು ಮಾತ್ರ ನಿಸ್ಸಹಾಯಕರಾಗಿದ್ದು,ಯಾವುದೇ ಪ್ರತಿರೋಧ ತೋರಲಿಲ್ಲ.
ಬುಡಕಟ್ಟು ಜಿರ್ಗಾಗೆ ತಾವು ಬುನೇರ್ ತ್ಯಜಿಸುವುದಾಗಿ ಹೇಳುತ್ತಿದ್ದ ತಾಲಿಬಾನಿಗಳು ಈಗ ಅಲ್ಲಿ ಗಟ್ಟಿಯಾಗಿ ಬೇರುಬಿಡುವ ಪ್ರಯತ್ನ ನಡೆಸಿದ್ದಾರೆ. ಸ್ವಾತ್ ತಾಲಿಬಾನ್ ನಾಯಕ ಮೌಲಾನಾ ಖಲೀಲ್ ಮಾಲಕ್‌ಪುರದ ಮಸೀದಿಯಲ್ಲಿ ಸೇರಿದ್ದ ಜನಸ್ತೋಮ ಉದ್ದೇಶಿಸಿ, ವಿವಿಧ ಪ್ರದೇಶಗಳಲ್ಲಿ ಷರಿಯತ್ ಕಾನೂನು ಜಾರಿಗೆ ತರುವ ಹೊಣೆಯನ್ನು ಹೊತ್ತುಕೊಳ್ಳುವಂತೆ ಯುವಜನತೆಗೆ ಕರೆ ನೀಡಿದರು.
|