ಪಾಕಿಸ್ತಾನದ ಅಧ್ಯಕ್ಷ ಅಸೀಫ್ ಅಲಿ ಜರ್ದಾರಿ ಸೋಮವಾರ ನಡೆದ ವೇಗದ ಬೆಳವಣಿಗೆಗಳಲ್ಲಿ ಸ್ವಾತ್ ಸೇರಿದಂತೆ ವಾಯವ್ಯ ಭಾಗಗಳಲ್ಲಿ ಷರಿಯತ್ ಕಾನೂನು ಜಾರಿಗೆ ತಮ್ಮ ಸಮ್ಮತಿಯ ಮುದ್ರೆ ಒತ್ತಿದ್ದಾರೆ. ತಾಲಿಬಾನ್ ಶಸ್ತ್ರಾಸ್ತ್ರಗಳನ್ನು ತ್ಯಜಿಸುತ್ತದೆಂಬ ವಿವಾದಿತ ಒಪ್ಪಂದಕ್ಕೆ ಪ್ರತಿಯಾಗಿ ಜರ್ದಾರಿ ಷರಿಯತ್ ಕಾನೂನು ಜಾರಿಗೆ ಸಮ್ಮತಿಸಿದ್ದಾರೆ.
ಸಂಸತ್ತು ಷರಿಯತ್ ಕಾನೂನು ಜಾರಿಗೆ ಅನುಮೋದನೆ ನೀಡಿದ ಬಳಿಕ ಜರ್ದಾರಿ ನಿಜಾಂ-ಎ-ಅದಲ್ ಶಾಸನಕ್ಕೆ ಸಹಿ ಹಾಕಿದರೆಂದು ವಾಯವ್ಯ ಗಡಿ ಪ್ರಾಂತ್ಯದ ಸಚಿವ ಬಷೀರ್ ಅಹ್ಮದ್ ಬಿಲೌರ್ ಹೇಳಿಕೆ ಉಲ್ಲೇಖಿಸಿ ಜಿಯೊ ಟಿವಿ ವರದಿ ಮಾಡಿದೆ.ಈ ಶಾಸನದಿಂದ ತಾಲಿಬಾನ್ ಹುಕುಂ ಪಾಲನೆಯಾಗುವ ಸ್ವಾತ್ ಸಹಿತ 7 ಜಿಲ್ಲೆಗಳನ್ನು ಒಳಗೊಂಡ, ಎನ್‌ಡಬ್ಲ್ಯುಎಫ್‌ಪಿಯ ಮಲಖಂಡ್ ಪ್ರದೇಶದಲ್ಲಿ ಷರಿಯತ್ ಕಾನೂನು ಜಾರಿಗೆ ಅವಕಾಶವಾಗಿದೆ.
ತಾವು ಪ್ರಾಂತೀಯ ಸರ್ಕಾರದ ಆದೇಶಕ್ಕೆ ಗೌರವ ನೀಡಿ ಜನರಿಗೆ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಗಿಲಾನಿ ಹೇಳಿಕೆ ಉಲ್ಲೇಖಿಸಿ ಜಿಯೊ ಟಿವಿ ವರದಿ ಮಾಡಿದೆ. ಮುತ್ತಾಹಿದಾ ಕವಾಮಿ ಆಂದೋಳನದ ಸದಸ್ಯರು ಶಾಸನವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು. ಅಮೆರಿಕ ಸಹಿತ ಅನೇಕ ಪಾಶ್ಚಿಮಾತ್ಯ ರಾಷ್ಚ್ರಗಳು ಒಪ್ಪಂದವನ್ನು ಹಿನ್ನಡೆಯೆಂದು ಪರಿಗಣಿಸಿದ್ದು, ತಾಲಿಬಾನ್ ಮುಂದೆ ತಲೆಬಾಗಿಸಿ ಅದಕ್ಕೆ ಪ್ರತಿಯಾಗಿ ಕಿಂಚಿತ್ ಪ್ರತಿಫಲ ಪಡೆಯುವುವುದಾಗಿದೆ ಎಂದು ಹೇಳಿವೆ.
ಒಪ್ಪಂದಕ್ಕೆ ಸಮ್ಮತಿಸಲು ಜರ್ದಾರಿ ವಿಳಂಬ ಮಾಡಿದ್ದರಿಂದ ಸೂಫಿ ಮಹಮ್ಮದ್ ಶಾಂತಿ ಶಿಬಿರವನ್ನು ರದ್ದು ಮಾಡಿ ಸ್ವಾತ್ ಕಣಿವೆಯಿಂದ ನಿರ್ಗಮಿಸಿದ್ದರಿಂದ ಒಪ್ಪಂದವು ಬಿದ್ದುಹೋಗಿತ್ತು. ಬಳಿಕ ಸ್ಪಷ್ಟನೆ ನೀಡಿ ಒಪ್ಪಂದವು ಮುರಿದುಬಿದ್ದಿಲ್ಲ ಮತ್ತು ಜರ್ದಾರಿ ಸಹಿ ಹಾಕುವುದರ ಮೇಲೆ ಅವಲಂಬಿತವಾಗಿದೆಯೆಂದು ಹೇಳಿದ್ದನು.
|