ತಮ್ಮ ರಾಷ್ಟ್ರದ ರಾಕೆಟ್ ಉಡಾವಣೆಯನ್ನು ಖಂಡಿಸಿದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಹೇಳಿಕೆಗೆ ಪ್ರತಿಭಟನಾರ್ಥವಾಗಿ ಉತ್ತರ ಕೊರಿಯವು ತನ್ನ ಅಣ್ವಸ್ತ್ರ ಪ್ರತಿರೋಧಕವನ್ನು ಬಲಪಡಿಸಲು ನಿರ್ಧರಿಸಿದೆ. ಜತೆಗೆ ಅಣ್ವಸ್ತ್ರ ಕಾರ್ಯಕ್ರಮ ಸ್ಥಗಿತಗೊಳಿಸುವ ಗುರಿ ಹೊಂದಿರುವ ಆರು ರಾಷ್ಟ್ರಗಳೊಂದಿಗಿನ ಮಾತುಕತೆಗೆ ಬಹಿಷ್ಕಾರ ಹಾಕಿದೆ.
ಉತ್ತರ ಕೊರಿಯ ವಿದೇಶಾಂಗ ಸಚಿವಾಲಯವು ತನ್ನ ಹೇಳಿಕೆಯಲ್ಲಿ, ವಿಶ್ವಸಂಸ್ಥೆಯ ಕ್ರಮವನ್ನು ದೃಢವಾಗಿ ಖಂಡಿಸುವುದಾಗಿ ತಿಳಿಸಿತು. ಅದು ರಾಷ್ಟ್ರದ ಸಾರ್ವಭೌಮತೆಯ ಉಲ್ಲಂಘನೆಯಾಗಿದ್ದು, ಜನರ ಗೌರವವನ್ನು ಕುಂದಿಸುತ್ತದೆಂದು ಹೇಳಿದೆ.
ವೈರಿ ಪಡೆಗಳ ಮಿಲಿಟರಿ ಬೆದರಿಕೆ ಹತ್ತಿಕ್ಕಲು ನಮಗೆ ಅಣ್ವಸ್ತ್ರ ಪ್ರತಿರೋಧಕ ಶಕ್ತಿಯನ್ನು ಬಲಪಡಿಸದೇ ಗತ್ಯಂತರವಿಲ್ಲ ಎಂದು ಹೇಳಿಕೆ ತಿಳಿಸಿದೆ. ತಾವು ಭಾಗವಹಿಸುತ್ತಿರುವ ಆರು ರಾಷ್ಟ್ರಗಳ ಮಾತುಕತೆ ಇನ್ನು ಮೇಲೆ ಅಗತ್ಯವಿಲ್ಲ ಎಂದೂ ಹೇಳಿಕೆ ತಿಳಿಸಿದೆ.
ಚೀನಾ, ಜಪಾನ್, ರಷ್ಯಾ, ದಕ್ಷಿಣ ಕೊರಿಯ ಮತ್ತು ಅಮೆರಿಕ ಭಾಗವಹಿಸಿರುವ ಮಾತುಕತೆ 2003ರಲ್ಲಿ ಆರಂಭವಾಗಿದ್ದು, ಉತ್ತರಕೊರಿಯ ಅಣ್ವಸ್ತ್ರ ಕಾರ್ಯಕ್ರಮ ಸ್ಥಗಿತಗೊಳಿಸುವ ಗುರಿ ಹೊಂದಿದೆ.
ಸ್ಥಗಿತಗೊಳಿಸಿದ ಅಣ್ವಸ್ತ್ರ ಸೌಲಭ್ಯಗಳ ಮರುಚಾಲನೆಗೆ ನಾವು ಕ್ರಮ ಕೈಗೊಳ್ಳುತ್ತೇವೆಂದು ಹೇಳಿಕೆ ತಿಳಿಸಿದೆ. ಏಪ್ರಿಲ್ ಐದರಂದು ರಾಕೆಟ್ ಉಡಾವಣೆಯನ್ನು ಭದ್ರತಾ ಮಂಡಳಿ ಖಂಡಿಸಿ ಸರ್ವಾನುಮತದ ನಿರ್ಣಯ ಕೈಗೊಂಡಿದ್ದರಿಂದ ಉತ್ತರ ಕೊರಿಯದಿಂದ ತೀಕ್ಷ್ಣ ಪ್ರತಿಕ್ರಿಯೆಯ ಭಾಗವಾಗಿ ಹೇಳಿಕೆ ನೀಡಿದೆ.
|