ವಿಶ್ವಸಂಸ್ಥೆ ಅಣ್ವಸ್ತ್ರ ತಪಾಸಣಾಕಾರರಿಗೆ ಸಹಕಾರ ನೀಡುವುದಕ್ಕೆ ತೆರೆಎಳೆದಿರುವ ಉತ್ತರಕೊರಿಯವು, ತಮ್ಮ ದೇಶದಿಂದ ತೊಲಗುವಂತೆ ಅವರಿಗೆ ಆದೇಶ ನೀಡಿದೆಯೆಂದು ಅಂತಾರಾಷ್ಟ್ರೀಯ ಅಣು ಇಂಧನ ಆಯೋಗ ತಿಳಿಸಿದೆ.
ಯಾಂಗ್‌ಬ್ಯಾನ್ ಸ್ಥಾವರದಿಂದ ಮೊಹರುಗಳನ್ನು ಮತ್ತು ಉಪಕರಣಗಳನ್ನು ತೆಗೆಯುವಂತೆ ಐಎಇಎಗೆ ಪ್ಯೋಂಗ್‌ಯಾಂಗ್ ತಿಳಿಸಿದ್ದು, ಪರಮಾಣು ಸೌಲಭ್ಯಗಳನ್ನು ಕ್ರಿಯಾಶೀಲಗೊಳಿಸುವುದಾಗಿ ತಿಳಿಸಿದೆಯೆಂದು ಕಾವಲುಸಮಿತಿ ಹೇಳಿದೆ.
ಏತನ್ಮಧ್ಯೆ, ಪ್ರಚೋದನಾಕಾರಿ ಬೆದರಿಕೆಗಳನ್ನು ನಿಲ್ಲಿಸುವಂತೆ ಶ್ವೇತಭವನ ಉತ್ತರಕೊರಿಯಕ್ಕೆ ಎಚ್ಚರಿಸಿದೆ. ರಷ್ಯಾ ಮತ್ತು ಚೀನಾ ಕೂಡ ಉತ್ತರಕೊರಿಯ ತನ್ನ ನಿರ್ಧಾರವನ್ನು ಪುನರ್‌ಪರಿಶೀಲಿಸಬೇಕೆಂದು ತಿಳಿಸಿದೆ.
ಉತ್ತರಕೊರಿಯ ದೂರಗಾಮಿ ರಾಕೆಟ್ ಹಾರಿಸಿದ್ದೇ ಉತ್ತರ ಕೊರಿಯ ಮತ್ತು ವಿಶ್ವಸಂಸ್ಥೆ ನಡುವೆ ವಿವಾದದ ಕೇಂದ್ರಬಿಂದುವಾಗಿದೆ. ರಾಕೆಟ್ ಉಡಾವಣೆ ಖಂಡಿಸಿ ವಿಶ್ವಸಂಸ್ಥೆಯ ಹೇಳಿಕೆಯಿಂದ ಉತ್ತರಕೋರಿಯ ರೋಷತಪ್ತವಾಗಿತ್ತು. ಕಕ್ಷೆಯಲ್ಲಿ ಸಂಪರ್ಕ ಉಪಗ್ರಹ ಇರಿಸುವುದು ರಾಕೆಟ್ ಉಡಾವಣೆಯ ಗುರಿ ಎಂದು ಉತ್ತರಕೊರಿಯ ಹೇಳುತ್ತಿದೆ.
ಆದರೆ ದೂರವ್ಯಾಪ್ತಿಯ ಕ್ಷಿಪಣಿ ತಂತ್ರಜ್ಞಾನದ ಪರೀಕ್ಷೆಯನ್ನು ಉತ್ತರಕೊರಿಯ ನಡೆಸುತ್ತಿದೆಯೆಂದು ಇತರೆ ರಾಷ್ಟ್ರಗಳು ಹುಯಿಲೆಬ್ಬಿಸಿವೆ. ಖಂಡಾಂತರ ಕ್ಷಿಪಣಿ ಅಭಿವೃದ್ಧಿ ನಿಷೇಧಿಸಿದ ವಿಶ್ವಸಂಸ್ಥೆ ನಿರ್ಣಯದ ಉಲ್ಲಂಘನೆಯೆಂದೂ ಅವು ಕೂಗೆಬ್ಬಿಸಿವೆ. ತನ್ನ ಪರಮಾಣು ಕಾರ್ಯಕ್ರಮ ಸ್ಥಗಿತಗೊಳಿಸುವ ಮಾತುಕತೆಯಿಂದ ತಾನು ಹಿಂದೆಸರಿಯುತ್ತಿರುವುದಾಗಿ ಕೂಡ ಉತ್ತರಕೊರಿಯ ಹೇಳಿದೆ.
|