ಇರಾನ್‌ನಲ್ಲಿ ಬೇಹುಗಾರಿಕೆ ನಡೆಸಿದ ಆರೋಪಕ್ಕೆ ಗುರಿಯಾಗಿರುವ ಇರಾನ್-ಅಮೆರಿಕನ್ ಪತ್ರಕರ್ತೆಯೊಬ್ಬರು ಈ ವಾರ ವಿಚಾರಣೆಯನ್ನು ಎದುರಿಸಿದ್ದು, ತೀರ್ಪು ಶೀಘ್ರದಲ್ಲೇ ಬರುವುದೆಂದು ನಿರೀಕ್ಷಿಸಿರುವುದಾಗಿ ಇರಾನ್ ಅಧಿಕಾರಿಯೊಬ್ಬರು ತಿಳಿಸಿದರು. ರೋಕ್ಸಾನಾ ಸಬೇರಿಯ ಪ್ರಥಮ ವಿಚಾರಣೆ ಸಭೆ ಸೋಮವಾರ ನಡೆಯಿತೆಂದು ನ್ಯಾಯಾಂಗ ವಕ್ತಾರ ಅಲಿ ಜಮ್‌ಶಿದಿ ಟೆಹರಾನ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
31 ವರ್ಷ ಪ್ರಾಯದ ಸಬೇರಿಯನ್ನು ಟೆಹರಾನ್ ಬಳಿಯ ಎವಿನ್ ಬಂಧೀಖಾನೆಯಲ್ಲಿ ಇರಿಸಲಾಗಿದೆ. ಮೂರು ವರ್ಷಗಳ ಕೆಳಗೆ ಬಿಬಿಸಿಗೆ ಸಬೇರಿ ಕೆಲಸ ಮಾಡಿದ್ದರು. ಅಮೆರಿಕದ ರೇಡಿಯೊ ಜಾಲ ಎನ್‌ಪಿಆರ್ ಮತ್ತು ಟಿವಿ ಜಾಲ ಫಾಕ್ಸ್ ನ್ಯೂಸ್‌ಗೆ ಕೂಡ ಅವರು ಸೇವೆ ಸಲ್ಲಿಸಿದ್ದರು. ಸಬೇರಿ ಇದಕ್ಕೆ ಮುಂಚಿತವಾಗಿ ಅಷ್ಟೊಂದು ಗಂಭೀರವಲ್ಲದ ಮದ್ಯ ಖರೀದಿ ಆರೋಪವನ್ನು ಎದುರಿಸಿದ್ದರು.
ಬಳಿಕ ಕ್ರಮಬದ್ಧ ಪ್ರೆಸ್ ಕಾರ್ಡ್ ಇಲ್ಲದೇ ಪತ್ರಕರ್ತೆ ಹುದ್ದೆಯನ್ನು ನಿರ್ವಹಿಸಿದ ಆರೋಪ ಹೊರಿಸಲಾಯಿತು. ಕಳೆದ ವಾರ ಇರಾನ್ ಪ್ರಾಸಿಕ್ಯೂಟರ್‌ಗಳು ಅಮೆರಿಕಕ್ಕೆ ಬೇಹುಗಾರಿಕೆ ನಡೆಸಿದ ಆರೋಪವನ್ನು ಅವರ ವಿರುದ್ಧ ಹೊರಿಸಿದ್ದಾರೆ.ಇರಾನ್ ಕ್ರಾಂತಿಕಾರಿ ಕೋರ್ಟ್‌ನಲ್ಲಿ ರಹಸ್ಯ ವಿಚಾರಣೆ ನಡೆಸಲಾಯಿತೆಂದು ನ್ಯಾಯಾಂಗ ಸಚಿವಾಲಯ ಹೇಳಿದೆ.
ಆದರೆ ಅಮೆರಿಕದ ವಿದೇಶಾಂಗ ಇಲಾಖೆ ಸಬೇರಿ ವಿರುದ್ಧ ಆರೋಪಗಳು ನಿರಾಧಾರವೆಂದು ಟೀಕಿಸಿದ್ದು, ಅವರನ್ನು ಬಿಡುಗಡೆ ಮಾಡುವಂತೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಆಗ್ರಹಿಸಿದ್ದಾರೆ. ಅಮೆರಿಕ ವಿದೇಶಾಂಗ ಇಲಾಖೆಯ ಆರೋಪಗಳ ವಿರುದ್ಧ ಜಮ್ಷಿದಿ ಟೀಕಿಸಿದ್ದು, ಆರೋಪಗಳನ್ನು ನೋಡದೇ ಅಭಿಪ್ರಾಯ ನೀಡುವುದು ಹಾಸ್ಯಾಸ್ಪದವೆಂದು ಹೇಳಿದೆ. |