ವಿಶ್ವದಲ್ಲೇ ಪ್ರಥಮವಾದ ತದ್ರೂಪಿ ಒಂಟೆಯನ್ನು ಸೃಷ್ಟಿಸಿರುವುದಾಗಿ ದುಬೈ ವಿಜ್ಞಾನಿಗಳು ಹೇಳಿದ್ದಾರೆ. ಸುಮಾರು 5 ವರ್ಷಗಳ ಪರಿಶ್ರಮದ ಬಳಿಕ ಒಂದು ಡುಬ್ಬವಿರುವ ಹೆಣ್ಣು ಒಂಟೆ ಇಂಜಾಝ್ ಏಪ್ರಿಲ್ 8ರಂದು ಜನಿಸಿತೆಂದು ಯುಎಇ ಸುದ್ದಿಪತ್ರಿಕೆಗಳು ವರದಿ ಮಾಡಿವೆ. ವಯಸ್ಕ ಒಂಟೆಯ ಭ್ರೂಣದ ಜೀವಕೋಶದಿಂದ ತೆಗೆದ ಡಿಎನ್‌ಎಯನ್ನು ಬಾಡಿಗೆ ತಾಯಿಯ ಭ್ರೂಣದಲ್ಲಿ ಇರಿಸುವ ಮೂಲಕ ತದ್ರೂಪಿ ಒಂಟೆಯ ಜನನವಾಯಿತೆಂದು ವಿಜ್ಞಾನಿಗಳು ಹೇಳಿದ್ದಾರೆ.
ಅರೇಬಿಕ್‌ನಲ್ಲಿ ಇಂಜಾಝ್‌ಗೆ ಸಾಧನೆ ಎಂದು ಅರ್ಥವಿದ್ದು, 378 ದಿನಗಳ ಬಸಿರಿನ ಅವಧಿ ಬಳಿಕ ಅದು ಜನಿಸಿತೆಂದು ವರದಿಗಳು ಹೇಳಿವೆ. ಹಾಲು ಉತ್ಪಾದಿಸುವ ಒಂಟೆಗಳ ವಂಶವಾಹಿಗಳನ್ನು ರಕ್ಷಿಸಿಡುವ ವಿಧಾನವನ್ನು ಗಮನಾರ್ಹ ಸಂಶೋಧನೆಯಿಂದ ಸಾಬೀತಾಗಿದೆಯೆಂದು ಒಂಟೆ ಸಂತಾನೋತ್ಪತ್ತಿ ಕೇಂದ್ರದ ಡಾ. ಲುಲು ಸ್ಕಿಡ್‌ಮೋರ್ ತಿಳಿಸಿದ್ದಾರೆ. ಮರಿ ಒಂಟೆಯು 30ಕೇಜಿ ತೂಕವಿದ್ದು, ಜೀವಕೋಶಗಳನ್ನು ತೆಗೆದ ಒಂಟೆಯ ತದ್ರೂಪವನ್ನು ಹೊಂದಿರುವುದಾಗಿ ಪತ್ರಿಕೆ ವರದಿ ಮಾಡಿದೆ. ಆದರೆ ತಾಯಿ ಒಂಟೆಯನ್ನು ಮಾಂಸಕ್ಕಾಗಿ 2005ರಲ್ಲಿ ಕೊಲ್ಲಲಾಗಿದೆ ಎಂದೂ ಸುದ್ದಿಪತ್ರಿಕೆ ತಿಳಿಸಿದೆ. |