ಅಮೆರಿಕದ ನ್ಯೂಯಾರ್ಕ್ ಆಸ್ಪತ್ರೆಯೊಂದರ ಸಿಬ್ಬಂದಿಯು ಮೃತ್ಯುಶಯ್ಯೆಯಲ್ಲಿದ್ದ ಸಿಖ್ ರೋಗಿಯ ಸಾವಿಗೆ ಒಂದು ತಿಂಗಳ ಮುಂಚೆ ಗಡ್ಡ, ಕಣ್ಣಿನ ಹುಬ್ಬಿನ ಕೂದಲು ಮತ್ತು ಮೀಸೆಯನ್ನು ನಿರ್ಲಕ್ಷ್ಯದಿಂದ ಬೋಳಿಸಿದ್ದಕ್ಕಾಗಿ 20,000 ಡಾಲರ್ ಪರಿಹಾರವನ್ನು ರೋಗಿಯ ಕುಟುಂಬಕ್ಕೆ ನೀಡಿದೆ.
ಅಲ್ಜಮೇರ್ ಕಾಯಿಲೆಯಿಂದ ನರಳುತ್ತಿದ್ದ ಪ್ಯಾರಾ ಸಿಂಗ್ ಸಹಾನ್‌ಸ್ರಾ ಕುಟುಂಬದ ಜತೆ ಕೋರ್ಟ್ ಹೊರಗಿನ ಇತ್ಯರ್ಥದ ರೀತ್ಯ ವೆಸ್ಟ್‌ಚೆಸ್ಟರ್ ಕೌಂಟಿ ಆರೋಗ್ಯಸೇವೆಯು ಹಣವನ್ನು ಅವರ ಕುಟುಂಬಕ್ಕೆ ಪಾವತಿಮಾಡಿದೆಯೆಂದು ಯುನೈಟೆಡ್ ಸಿಖ್ಸ್ ಸಂಸ್ಥೆ ತಿಳಿಸಿದೆ. ಸಿಖ್ಖರು ಉದ್ದದ ತಲೆಕೂದಲು ಬಿಡುವ ಧಾರ್ಮಿಕ ಆಚರಣೆ ಕುರಿತು ಆಸ್ಪತ್ರೆಯ ಸಿಬ್ಬಂದಿಗೆ ಸಹಾನ್‌ಸ್ರಾ ಕುಟುಂಬ ಮುಂಚಿತವಾಗಿ ಹೇಳಿತ್ತು ಮತ್ತು ರೋಗಿಯ ಹಾಸಿಗೆಯಲ್ಲಿ ನೆನಪಿಗಾಗಿ ಸೂಚನಾಫಲಕಗಳನ್ನು ಇಟ್ಟಿತ್ತು. ಆದರೆ ಆಸ್ಪತ್ರೆಯು ಅದಕ್ಕೆ ಅವಕಾಶವಿಲ್ಲವೆಂದು ತೆಗೆದುಹಾಕಿ ಸಹನ್‌ಸ್ರಾ ಕೂದಲು ಕತ್ತರಿಸುವುದಿಲ್ಲವೆಂದು ಆಶ್ವಾಸನೆ ನೀಡಿತ್ತು. ಆದರೆ ವಿಷಯ ತಿಳಿಯದ ಹೊಸ ದಾದಿಯೊಬ್ಬರು ಸಹನ್‌ಸ್ರಾ ಗಡ್ಡ, ಕಣ್ಣಿನ ಹುಬ್ಬಿನ ಕೂದಲು ಮತ್ತು ಮೀಸೆಯನ್ನು ಸಂಪೂರ್ಣ ತೆಗೆದು ಸಹನ್‌ಸ್ರಾ ಅವರ ಆಳವಾದ ಧಾರ್ಮಿಕ ಭಾವನೆಗಳಿಗೆ ನೋವು ಉಂಟುಮಾಡಿದರೆಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. |