ಮ್ಯಾನ್ಮಾರ್ ಪ್ರಸಕ್ತ ಸ್ಥಿತಿಗತಿ ಬಗ್ಗೆ ತಮ್ಮ ಕಳವಳವನ್ನು ಪುನರುಚ್ಚರಿಸಿದ ವಿಶ್ವಸಂಸ್ಥೆ ಪ್ರಧಾನಕಾರ್ಯದರ್ಶಿ ಬಾನ್ ಕಿ ಮೂನ್, ಆಂಗ್ ಸಾನ್ ಸೂಕಿ ಸಹಿತ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಿ ಸ್ವಂತ ಜನರ ಮಾನವ ಹಕ್ಕು ರಕ್ಷಣೆ ಮಾಡುವಂತೆ ಮಿಲಿಟರಿ ಜುಂಟಾಗೆ ಒತ್ತಿಹೇಳಿದರು.
ಪ್ರಧಾನಕಾರ್ಯದರ್ಶಿ ಮತ್ತು ವಿಶೇಷ ಸಲಹೆಗಾರರು ಸೂಕಿ ಮತ್ತಿತರ ರಾಜಕೀಯ ಕೈದಿಗಳ ಬಿಡುಗಡೆಗೆ ಮೇಲಿಂದ ಮೇಲೆ ಕರೆ ನೀಡಿದ್ದು, ಅದನ್ನು ಮುಂದುವರಿಸುತ್ತಾರೆಂದು ಮೂನ್ ವಕ್ತಾರ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಷ್ಟ್ರೀಯ ಸಂಧಾನ, ಪ್ರಜಾಪ್ರಭುತ್ವ ಪರಿವರ್ತನೆ ಮತ್ತು ಮಾನವಹಕ್ಕಿನ ಗೌರವಕ್ಕೆ ಉತ್ತೇಜನ ನೀಡುವ ಬಗ್ಗೆ ಮ್ಯಾನ್ಮಾರ್ ಪರಿಸ್ಥಿತಿಯನ್ನು ಪ್ರಧಾನ ಕಾರ್ಯದರ್ಶಿ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆಂದು ಮೂನ್ ವಕ್ತಾರ ತಿಳಿಸಿದರು.
ಅಮೆರಿಕದ ಮಹಿಳಾ ಸೆನೆಟರ್‌ಗಳು ಮ್ಯಾನ್ಮಾರ್‌ನಲ್ಲಿ ಎಲ್ಲ ರಾಜಕೀಯ ಕೈದಿಗಳ ಬಿಡುಗಡೆಗೆ ಮಿಲಿಟರಿ ಜುಂಟಾಗೆ ಕರೆ ನೀಡಬೇಕೆಂದು ಪ್ರಧಾನ ಕಾರ್ಯದರ್ಶಿಗೆ ಒತ್ತಾಯಿಸಿದ್ದರು. ಬರ್ಮಾದಲ್ಲಿ ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳು ಜರುಗುತ್ತಿರುವ ಬಗ್ಗೆ ಮಹಿಳಾ ಸೆನೆಟ್ ಸದಸ್ಯರು ತೀವ್ರ ಕಳವಳ ವ್ಯಕ್ತಪಡಿಸಿದ್ದರು. |