ಆತ್ಮಾಹುತಿ ಕಾರ್ ಬಾಂಬರ್ ತನ್ನ ಸ್ಫೋಟಕ ತುಂಬಿದ ಟ್ರಕ್ಕನ್ನು ವಾಯವ್ಯ ಪಾಕಿಸ್ತಾನದ ಪೊಲೀಸ್ ಚೌಕಿಯೊಂದಕ್ಕೆ ಅಪ್ಪಳಿಸಿದ್ದರಿಂದ 16 ಜನರು ಅಸುನೀಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದಲ್ಲಿ 16ಮಂದಿ ಸತ್ತಿರುವುದನ್ನು ಆಸ್ಪತ್ರೆ ಅಧಿಕಾರಿ ಮಹಮ್ಮದ್ ಅಲಿ ಖಚಿತಪಡಿಸಿದ್ದಾರೆ.
ಚಾರಸಾದ್ದಾ ನಗರದ ಹೊರವಲಯದ ಹರಿಚಂದ್ ಗ್ರಾಮದ ಚೌಕಿಯಲ್ಲಿದ್ದ ಪೊಲೀಸರು ಟ್ರಕ್ ನಿಲ್ಲಿಸಲು ಯತ್ನಿಸಿದರಾದರೂ ಆತ್ಮಾಹುತಿ ಬಾಂಬರ್ ಅಷ್ಟರಲ್ಲಿ ಸ್ಫೋಟಿಸಿಕೊಂಡ ಎಂದು ಜಿಲ್ಲಾ ಪೊಲೀಸ್ ಮುಖ್ಯಸ್ಥ ಮುಹಮ್ಮದ್ ರಿಯಾಜ್ ತಿಳಿಸಿದ್ದಾರೆ.
ಪೊಲೀಸ್ ಚೌಕಿಯಲ್ಲಿ ಡಿಸಿಪಿ ಮತ್ತು ಸ್ಟೇಷನ್ ಹೌಸ್ ಅಧಿಕಾರಿ ಸೇರಿದಂತೆ 10 ಮಂದಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಎಲ್ಲರೂ ಸ್ಫೋಟಕ್ಕೆ ಬಲಿಯಾಗಿದ್ದಾರೆ. ಮೃತಪಟ್ಟ ಉಳಿದವರು ನಾಗರಿಕರೆಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಗೆ ಯಾವುದೇ ಸಂಘಟನೆ ಜವಾಬ್ದಾರಿ ಹೊತ್ತಿಲ್ಲ. ಪ್ರಕ್ಷುಬ್ಧ ಮೊಹಮಾಂಡ್ ಮತ್ತು ಬಜಾರ್ ಬುಡಕಟ್ಟು ಪ್ರದೇಶಗಳು ಮತ್ತು ಮಲಾಕಂಡ್ ವಿಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇವೆಲ್ಲ ಪ್ರದೇಶಗಳಲ್ಲಿ ತಾಲಿಬಾನ್ ಪ್ರಬಲ ಉಪಸ್ಥಿತಿ ಹೊಂದಿದೆ.
ಚಾರ್‌ಸಾಡ್ಡಾದಲ್ಲಿ ಪೊಲೀಸರು ಪಿಪಿಪಿಯ ನಾಯಕ ಶೆರಪಾವೊ ಮೇಲೆ ಆತ್ಮಾಹುತಿ ದಾಳಿಯನ್ನು ಇತ್ತೀಚೆಗೆ ವಿಫಲಗೊಳಿಸಿದ್ದರು. ಬಾಂಬರ್ ಸ್ಫೋಟಿಸಿಕೊಳ್ಳುವ ಮುಂಚಿತವಾಗಿ ಅವನಿಗೆ ಗುಂಡಿಕ್ಕಿ ಹತ್ಯೆಮಾಡಿದ್ದರಿಂದ ಆತ್ಮಾಹುತಿ ದಾಳಿ ವಿಫಲಗೊಂಡಿತ್ತು. ಈ ಘಟನೆಗೆ ಪ್ರತೀಕಾರ ತೀರಿಸಲು ಬುಧವಾರದ ದಾಳಿ ನಡೆಸಲಾಗಿದೆಯಂದು ಕೆಲವು ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದಲ್ಲಿ ಸತ್ತಿರುವ ಸ್ಟೇಷನ್ ಹೌಸ್ ಅಧಿಕಾರಿ ಜೆಹಾಂಗೀರ್ ಖಾನ್ ಮುಂಚಿನ ಘಟನೆಯಲ್ಲಿ ಬಾಂಬರ್‌ಗೆ ಗುಂಡಿಕ್ಕುವ ಮೂಲಕ ಆತ್ಮಾಹುತಿ ದಾಳಿಯನ್ನು ವಿಫಲಗೊಳಿಸಿದ್ದರು. |