ಪ್ರಕ್ಷುಬ್ಧ ಔರಕ್‌ಜಾಯಿ ಬುಡಕಟ್ಟು ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತ ಸಿಖ್ ಸಮುದಾಯದ ಜನರು ತಾಲಿಬಾನ್ ಉಗ್ರಗಾಮಿಗಳಿಗೆ ಸುಮಾರು 2 ಕೋಟಿ ರೂಪಾಯಿಗಳನ್ನು 'ತೆರಿಗೆ' ರೂಪದಲ್ಲಿ ತೆತ್ತಿದ್ದಾರೆಂದು ತಿಳಿದುಬಂದಿದೆ. ಉಗ್ರಗಾಮಿಗಳು ಸಿಖ್ಖರ ಕೆಲವು ಮನೆಗಳನ್ನು ಬಲಾತ್ಕಾರದಿಂದ ವಶಪಡಿಸಿಕೊಂಡು ಸಿಖ್ ನಾಯಕನೊಬ್ಬನನ್ನು ಅಪಹರಿಸಿದ್ದರು.
ಇಸ್ಲಾಮಿಕ್ ಆಡಳಿತದ ಅಡಿ ವಾಸಿಸುವ ಮುಸ್ಲಿಮೇತರರಿಗೆ ವಿಧಿಸುವ ಜಿಝಿಯ ತೆರಿಗೆ ರೂಪದಲ್ಲಿ 50 ಮಿಲಿಯ ರೂಪಾಯಿ ಪಾವತಿ ಮಾಡಿದರೆ ಮನೆಗಳನ್ನು ತೆರವು ಮಾಡುವುದಾಗಿ ತಾಲಿಬಾನ್ ಕಟ್ಟಾಜ್ಞೆ ಮಾಡಿತ್ತು. ಆದರೆ ಅಂತಿಮವಾಗಿ ಉಗ್ರಗಾಮಿಗಳು 20 ಮಿಲಿಯ ರೂಪಾಯಿಗಳಿಗೆ ರಾಜಿ ಮಾಡಿಕೊಂಡರು. ಬುಧವಾರ 'ತೆರಿಗೆ'ಯ ಮೊತ್ತವನ್ನು ತೆತ್ತ ಬಳಿಕ ಉಗ್ರಗಾಮಿಗಳು ತಾವು ವಶಪಡಿಸಿಕೊಂಡ ಮನೆಗಳನ್ನು ತೆರವು ಮಾಡಿ ಸಿಖ್ ನಾಯಕ ಸೈವಾಂಗ್ ಸಿಂಗ್‌ನನ್ನು ಬಿಡುಗಡೆ ಮಾಡಿದರೆಂದು ಅಧಿಕಾರಿಗಳು ಹೇಳಿದ್ದಾರೆ.
ಔರಕಜಾಯ್ ಪ್ರದೇಶದಲ್ಲಿ ಎಲ್ಲಿ ಬೇಕಾದರೂ ವಾಸಿಸಲು ಸಿಖ್ಖರು ಸ್ವತಂತ್ರರು ಎಂದು ತಾಲಿಬಾನ್ ಘೋಷಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಸಿಖ್ ಸಮುದಾಯದ ರಕ್ಷಣೆ ಮಾಡುವುದಾಗಿ ಆಶ್ವಾಸನೆ ನೀಡಿದ ತಾಲಿಬಾನಿಗಳು, ಸಿಖ್ಖರು ಜಿಝಿಯ ಪಾವತಿ ಮಾಡಿದ ಬಳಿಕ ಯಾರೊಬ್ಬರೂ ಅವರಿಗೆ ಹಾನಿ ಮಾಡುವುದಿಲ್ಲವೆಂದು ತಿಳಿಸಿದ್ದಾರೆ. ಕಾಸಿಂಖೇಲ್ ಗ್ರಾಮದಲ್ಲಿ ಕನಿಷ್ಠ 10 ಮನೆಗಳನ್ನು ಉಗ್ರಗಾಮಿಗಳು ಮಂಗಳವಾರ ವಶಪಡಿಸಿಕೊಂಡಿದ್ದರು. ಕಾಸಿಂಖೇಲ್ ಪ್ರದೇಶದಲ್ಲಿ ಸುಮಾರು 35 ಸಿಖ್ ಕುಟುಂಬಗಳು ಅನೇಕ ವರ್ಷಗಳಿಂದ ಜೀವಿಸುತ್ತಿವೆ. |