ನೈಋತ್ಯ ಕಣಿವೆ ಪ್ರದೇಶದಲ್ಲಿ ತಾಲಿಬಾನ್ ಉಗ್ರಗಾಮಿಗಳ ಜೊತೆಗಿನ ಶಾಂತಿ ಒಪ್ಪಂದದ ಅಂಗವಾಗಿ ಜಾರಿಗೊಳಿಸಲಾಗಿದ್ದ ಕಟ್ಟಾ ಇಸ್ಲಾಮಿಕ್ ಕಾನೂನು ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಗ್ರಹಿಸಿರುವ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯೊಂದು, ಈ ಒಪ್ಪಂದವು ಮಹಿಳೆಯರಿಗೆ ದೊಡ್ಡ ಬೆದರಿಕೆ ಮತ್ತು ಆ ಪ್ರದೇಶವನ್ನು ಶಿಲಾಯುಗ ಕಾಲಕ್ಕೆ ಒಯ್ಯುತ್ತದೆ ಎಂದು ಹೇಳಿದೆ.
ಸ್ವಾಟ್ ಕಣಿವೆಯಲ್ಲಿ ತಾಲಿಬಾನ್‌ಗಳಿಗೆ ಪರ್ಯಾಯ ಆಡಳಿತಾತ್ಮಕ ನಿಯಂತ್ರಣವನ್ನು ಒಪ್ಪಿಸುವ ಪಾಕ್ ಸರಕಾರದ ಈ ನಿರ್ಧಾರವು ಮಹಿಳೆಯರ ಹಕ್ಕುಗಳಿಗೆ ಮತ್ತು ಇತರ ಮೂಲಭೂತ ಹಕ್ಕುಗಳಿಗೆ ತೀವ್ರ ಬೆದರಿಕೆಯೊಡ್ಡಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಎಂಬ ಸಂಘಟನೆ ಹೇಳಿದೆ.
ತಾಲಿಬಾನ್‌ಗಳು ಸ್ವಾಟ್ ಕಣಿವೆಯನ್ನು ಹಳೆ ಶಿಲಾಯುಗಕ್ಕೆ ಕೊಂಡೊಯ್ಯುತ್ತಾರೆ. ಈ ದೌರ್ಜನ್ಯದಲ್ಲಿ ಪಾಕ್ ಸರಕಾರವೂ ಸಹಭಾಗಿಯಾಗುತ್ತಿದೆ ಎಂದು ನ್ಯೂಯಾರ್ಕ್ ಮೂಲಕ ಗುಂಪಿನ ಹಿರಿಯ ಸಂಶೋಧಕ ಅಲಿ ದಯನ್ ಹಸನ್ ಅವರು ಹೇಳಿದ್ದಾರೆ. |