ದುರಂತ ಪ್ರೇಮಿಗಳಾದ ಆಂತೋನಿ ಮತ್ತು ಕ್ಲಿಯೋಪಾತ್ರ ಅವರ ಸಮಾಧಿಯಿರಬಹುದೆಂಬ ಶಂಕೆಯ ಮೇಲೆ ಪುರಾತತ್ವ ಸಂಶೋಧಕರು ಈಜಿಪ್ಟ್‌ನ ಮೂರು ಸ್ಥಳಗಳಲ್ಲಿ ಶೋಧಿಸುತ್ತಿದ್ದಾರೆ. ಅಲೆಕ್ಸಾಂಡ್ರಿಯ ನಗರಕ್ಕೆ ಹತ್ತಿರವಿರುವ ದೇವಸ್ಥಾನದ ಬಳಿ ಮುಂದಿನ ವಾರ ಉತ್ಖನನ ನಡೆಯಲಿದೆ. ಇತ್ತೀಚೆಗೆ 10 ಮಮ್ಮಿಗಳ ಸಮಾಧಿಗಳು ಪತ್ತೆಯಾಗಿದ್ದರಿಂದ ಆಂತೋನಿ ಮತ್ತು ಕ್ಲಿಯೋಪಾತ್ರ ದೇಹಗಳನ್ನು ಸಮೀಪದಲ್ಲೇ ಸಮಾಧಿ ಮಾಡಿರಬಹುದೆಂಬ ಆಧಾರದ ಮೇಲೆ ತಂಡಗಳು ಆ ಪ್ರದೇಶದಲ್ಲಿ ಕಾರ್ಯೋನ್ಮುಖವಾಗಿವೆ.
ತಂಡಗಳು ಕ್ಲಿಯೋಪಾತ್ರ ಅವರ ಎದೆಮಟ್ಟದ ವಿಗ್ರಹ ಮತ್ತು ಅವರ ಚಿತ್ರವಿರುವ ನಾಣ್ಯಗಳನ್ನು ಪತ್ತೆಹಚ್ಚಿವೆ. ಕಳೆದ ಮೂರು ವರ್ಷಗಳಿಂದ ಟಾಪೊಸಿರಿಸ್ ಮಾಗ್ನಾ ದೇವಸ್ಥಾನದಲ್ಲಿ ಪುರಾತತ್ವ ತಜ್ಞರು ಉತ್ಖನನ ಮಾಡುತ್ತಿದ್ದು, ಕ್ಲಿಯೋಪಾತ್ರ ಮತ್ತು ಆಂತೋನಿ ಸಮಾಧಿಗಳ ಸುಳಿವು ಸಿಗಬಹುದೆಂದು ಕಾತುರತೆಯಲ್ಲಿದ್ದಾರೆ. ಕ್ಲಿಯೋಪಾತ್ರ ನಾಣ್ಯ ಮತ್ತು ಪ್ರತಿಮೆಯ ಬಳಿ ಆಂತೋನಿಗೆ ಸೇರಿದ್ದೆಂದು ಹೇಳಲಾದ ಮುಖವಾಡ ಪತ್ತೆಯಾಗಿದೆ. ಆಂತೋನಿ ಮತ್ತು ಕ್ಲಿಯೋಪಾತ್ರ ಕ್ರಿ.ಪೂ. 30ರಲ್ಲಿ ಆಕ್ಟಿಯಮ್ ಯುದ್ಧದಲ್ಲಿ ಸೋಲನ್ನಪ್ಪಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.
ಕ್ಲಿಯೊಪಾತ್ರ ತುಂಬ ಕುರೂಪಿಯಾಗಿದ್ದಾಳೆಂದು ಕೆಲವು ವಿದ್ವಾಂಸರ ವಾದವನ್ನು ದೇವಸ್ಥಾನದಲ್ಲಿ ಪತ್ತೆಯದ ನಾಣ್ಯಗಳು ಸುಳ್ಳುಮಾಡಿವೆ ಎಂದು ಈಜಿಪ್ಟ್ ಮುಖ್ಯ ಪುರಾತತ್ವ ತಜ್ಞ ಜಾಹಿ ಹವಾಸ್ ತಿಳಿಸಿದ್ದಾರೆ. ತಾಪೊಸಿರಿಸ್‌ನಲ್ಲಿ ಪತ್ತೆಯಾದ ನಾಣ್ಯಗಳು ಕ್ಲಿಯೋಪಾತ್ರ ಚೆಲುವೆ ಎಂಬುದನ್ನು ಬಿಂಬಿಸುತ್ತೆಂದು ಅವರು ಹೇಳಿದ್ದಾರೆ. |