ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಪಕ್ಷವು ಬಹುಮತ ಗಳಿಸಲು ಸಾಧ್ಯವಿಲ್ಲ ಎಂದು ಅಮೆರಿಕದ ಚಿಂತಕರ ಚಾವಡಿಯೊಂದು ಅಭಿಪ್ರಾಯಪಟ್ಟಿದೆ. ಮುಂದಿನ ತಿಂಗಳು ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜಕೀಯ ಕುದುರೆ ವ್ಯಾಪಾರ ತೀವ್ರಗತಿಯನ್ನು ಪಡೆಯಲಿದ್ದು, ಸಣ್ಣ ಪಕ್ಷಗಳ ಬೆಂಬಲ ಗಳಿಸಲು ಎರಡೂ ಪಕ್ಷಗಳೂ ಹಣಾಹಣಿ ಹೋರಾಟಕ್ಕೆ ಇಳಿಯಲಿವೆಯೆಂದು ಅದು ಭವಿಷ್ಯ ನುಡಿದಿದೆ.
ಪ್ರಮುಖ ರಾಜ್ಯಗಳಲ್ಲಿ ಕಾಂಗ್ರೆಸ್ ಸ್ವಲ್ಪ ಮಟ್ಟಿಗೆ ಮುನ್ನಡೆ ಗಳಿಸುವಂತೆ ಕಂಡರೂ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಪ್ರಾಪ್ತಿಯಾಗುವುದಿಲ್ಲ. ಮೊದಲ ಹಂತದ ಚುನಾವಣೆ ಬಳಿಕ ಟೆಕ್ಸಾಸ್ ಮೂಲದ ಚಿಂತಕರ ಚಾವಡಿಯಾದ ಸ್ಟ್ರಾಟ್‌ಫರ್ ಚುನಾವಣೆ ವಿಶ್ಲೇಷಣೆಯಲ್ಲಿ ಮೇಲಿನ ಅಂಶಗಳನ್ನು ತಿಳಿಸಿದೆ.
ರಾಷ್ಟ್ರೀಯ ಪಕ್ಷಗಳ ಪ್ರಭಾವವು ವರ್ಷಗಳು ಉರುಳಿದಂತೆ ಮಸುಕಾಗಿದ್ದು, ಪ್ರಾದೇಶಿಕ ಮತ್ತು ಜಾತಿಆಧಾರಿತ ಪಕ್ಷಗಳು ಪ್ರವರ್ಧಿಸುತ್ತಿವೆ ಎಂದು ಸ್ಟ್ರಾಟ್‌ಫರ್ ಹೇಳಿದ್ದು, ಇದರ ಫಲವಾಗಿ ಚುನಾವಣೆ ಬಳಿಕ ಕುದುರೆ ವ್ಯಾಪಾರ ತೀವ್ರಗೊಳ್ಳಲಿದೆ ಎಂದು ಭವಿಷ್ಯ ನುಡಿದಿದೆ.
ಈ ಚುನಾವಣೆಯಲ್ಲಿ ತೃತೀಯ ರಂಗ ತನ್ನ ಹೆಜ್ಜೆ ಗುರುತು ಮೂಡಿಸಲಾರದು ಎಂದಿರುವ ಚಿಂತಕರ ಚಾವಡಿ, ಪ್ರಾದೇಶಿಕ ಪಕ್ಷಗಳ ಜತೆಗೂಡಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸವಾಲು ಹಾಕುವ ಅವಕಾಶ ಬಹಳ ಕಡಿಮೆಯೆಂದು ಅದು ಹೇಳಿದೆ.ಕಾಂಗ್ರೆಸ್ ಅಥವಾ ಬಿಜೆಪಿ ಅಧಿಕಾರಕ್ಕೆ ಬಂದರೆ ವಿದೇಶಾಂಗ ನೀತಿಯಲ್ಲಿ ಯಾವುದೇ ಬದಲಾವಣೆಯಾಗದು. ಆದರೆ ಎಡಪಕ್ಷಗಳ ಬೆಂಬಲ ಪಡೆದ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ವಿದೇಶಾಂಗ ನೀತಿಯಲ್ಲಿ ಮಾರ್ಪಾಟಿಗೆ ಎಡಪಕ್ಷಗಳ ಒತ್ತಡ ಎದುರಿಸಲಿದೆ ಅದು ಹೇಳಿದೆ. |