ಶ್ರೀಲಂಕಾ ವಿರುದ್ಧ ತನ್ನ ನಿಲುವನ್ನು ಕಠಿಣಗೊಳಿಸುವ ಸಂಕೇತದ ಹೇಳಿಕೆ ನೀಡಿರುವ ಒಬಾಮಾ ಆಡಳಿತವು ತಮಿಳರನ್ನು ಅಧಿಕಾರ ಹಂಚಿಕೆ ವ್ಯವಸ್ಥೆಯ ಮಾತುಕತೆಯಲ್ಲಿ ತೊಡಗಿಸುವ ಪ್ರಸ್ತಾವನೆಯನ್ನು ಮಂಡಿಸಬೇಕೆಂದು ರಾಜಪಕ್ಷೆ ಸರ್ಕಾರಕ್ಕೆ ಕರೆ ನೀಡಿದೆ.
ಹಿಂಸಾಚಾರ ಅಥವಾ ಭಯೋತ್ಪಾದನೆಗೆ ಉತ್ತೇಜನ ನೀಡದ ತಮಿಳು ನಾಗರಿಕರಿಗೆ ಅಧಿಕಾರ ಹಂಚಿಕೆ ವ್ಯವಸ್ಥೆ ಮಾತುಕತೆಯ ಪ್ರಸ್ತಾವನೆ ಮಂಡಿಸುವ ಮೂಲಕ ದ್ವೀಪದಲ್ಲಿ ನಿರಂತರ ಶಾಂತಿ ಮತ್ತು ಸಾಮರಸ್ಯ ಸಾಧಿಸಬಹುದೆಂದು ತಾವು ಶ್ರೀಲಂಕಾ ಸರ್ಕಾರಕ್ಕೆ ಕರೆ ನೀಡಿದ್ದಾಗಿ ವಿದೇಶಾಂಗ ಇಲಾಖೆ ವಕ್ತಾರ ರಾಬರ್ಟ್ ವುಡ್ ಪತ್ರಿಕಾಗೋಷ್ಠಿಯಲ್ಲಿ ವರದಿಗಾರರಿಗೆ ತಿಳಿಸಿದರು. ಶ್ರೀಲಂಕಾ ಸೇನೆಯ ಆಕ್ರಮಣದಿಂದ ಎಲ್‌ಟಿಟಿಇ ಬಹುತೇಕ ಸೋಲಿನ ಅಂಚಿನಲ್ಲಿದ್ದು, ಸುದೀರ್ಘ ಸಂಘರ್ಷಕ್ಕೆ ತೆರೆಎಳೆಯಲು ಅವಕಾಶವೊಂದು ಇರುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ವುಡ್ ತಿಳಿಸಿದ್ದಾರೆ. ಶ್ರೀಲಂಕಾದ ಎಲ್ಲ ಸಮುದಾಯಗಳ ಕಾನೂನುಬದ್ಧ ಆಕಾಂಕ್ಷೆಗಳನ್ನು ಈಡೇರಿಸುವ ರಾಜಕೀಯ ಪರಿಹಾರದ ಮೂಲಕ ನಿರಂತರ, ಸುದೀರ್ಘ ಶಾಂತಿ ಸಾಧಿಸಬಹುದು ಎಂದು ಅವರು ಹೇಳಿದ್ದಾರೆ. ತಮಿಳು ನಿರಾಶ್ರಿತರ ಶಿಬಿರಗಳಲ್ಲಿ ಅಂತಾರಾಷ್ಟ್ರೀಯ ಮಾನವತಾವಾದಿ ಗುಣಮಟ್ಟವನ್ನು ಜಾರಿಗೆ ತರಬೇಕೆಂದೂ, ಅಂತಾರಾಷ್ಟ್ರೀಯ ನೆರವು ಸಂಸ್ಥೆಗಳಿಗೆ ವೀಸಾ ನೀಡಿ ಶ್ರೀಲಂಕಾ ಪ್ರವೇಶಕ್ಕೆ ಅನುಮತಿಸಬೇಕೆಂದೂ ವುಡ್ ತಿಳಿಸಿದ್ದಾರೆ. |