ಜಾಂಬಿಯ, ಉಕ್ರೇನ್, ಅಮೆರಿಕ, ಸೈಪ್ರಸ್, ಸ್ವಿಟ್ಜರ್‌ಲ್ಯಾಂಡ್ ಜತೆಗೆ ಬ್ರಿಟನ್ ಮತ್ತು ಭಾರತದ 40 ಪ್ರಕೃತಿ ದೃಶ್ಯಗಳನ್ನು ಬಿಂಬಿಸುವ ಭಾರತೀಯ ಕಲಾವಿದರೊಬ್ಬರ ವರ್ಣಚಿತ್ರಗಳನ್ನು ಲಂಡನ್‍ನಲ್ಲಿ ಪ್ರದರ್ಶನಕ್ಕಿಡಲಾಗಿದೆ. ಭಾರತದ ಹೈ ಕಮೀಷನರ್ ಶಿವ ಶಂಕರ್ ಮುಖರ್ಜಿ ಕಲಾವಿದ ಎ.ಮುರುಗೇಶನ್ ಅವರ ವರ್ಣಚಿತ್ರಗಳನ್ನು ಉದ್ಘಾಟಿಸಿದ್ದಾರೆ. ಈ ವರ್ಣಚಿತ್ರಗಳು ಜಾಂಬಿಯದ ಬಾವೊಬಾಬ್ ಮರ, ಉಕ್ರೇನಿನ ಬರ್ಡಿಚಿವ್ ಧಾರ್ಮಿಕ ಕೇಂದ್ರ, ಲಂಡನ್ ಟವರ್ ಬ್ರಿಜ್ ಮತ್ತು ತಮಿಳುನಾಡಿನ ಗಂಗೈಕೊಂಡ ಚೋಳಪುರ ದೃಶ್ಯಗಳನ್ನು ಬಿಂಬಿಸಿವೆ.
ಜಾಂಬಿಯ ಪ್ರಕೃತಿ ದೃಶ್ಯಗಳನ್ನು ನೋಡಿ ತಾವು ಪುಳಕಿತರಾಗಿದ್ದಾಗಿ ಜಾಂಬಿಯದಲ್ಲಿ ಹೈಕಮೀಷನರ್ ಆಗಿ ಸೇವೆ ಸಲ್ಲಿಸಿದ್ದ ಮುಖರ್ಜಿ ಹೇಳಿದ್ದಾರೆ. ಭಾರತದ ಹೈಕಮೀಷನ್‌ನಲ್ಲಿ ಪತ್ರಿಕಾ ಮತ್ತು ಮಾಹಿತಿ ಸಚಿವೆಯಾಗಿರುವ ಸುಭಾಶಿನಿಯ ಪತಿಯಾದ ಮುರುಗೇಶನ್, ತಮ್ಮ ಪತ್ನಿಯ ರಾಜತಾಂತ್ರಿಕ ವೃತ್ತಿ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳಿಗೆ ಭೇಟಿ ನೀಡಿದ ಜೀವನದ ಅನುಭವಗಳಿಂದ ವಿವಿಧ ಕಲೆಗಳು ಮೂಡಿಬಂದವೆಂದು ಹೇಳಿದ್ದಾರೆ.
ಡಚ್ ವರ್ಣಚಿತ್ರ ಶಾಲೆಯಿಂದ ಆಕರ್ಷಿತರಾದ ಅವರು ಹಾಲೆಂಡ್‌ನಲ್ಲಿ 1997ರಲ್ಲಿ ವರ್ಣಚಿತ್ರಗಳನ್ನು ಬಿಡಿಸುವ ವೃತ್ತಿಗಿಳಿದರು. ವಾಟರ್‌ಕಲರ್ ಜರ್ನೀಸ್ ಎಂದು ನಾಮಾಂಕಿತವಾದ ಪ್ರದರ್ಶನದಲ್ಲಿ ಭಾರತೀಯ ವಿದ್ಯಾಭವನದಲ್ಲಿ 40 ಪ್ರಕೃತಿದೃಶ್ಯಗಳ ವರ್ಣಚಿತ್ರಗಳನ್ನು ಪ್ರೇಕ್ಷಕರ ವೀಕ್ಷಣೆಗೆ ಇಡಲಾಗಿದೆ. |