ಬುಷ್ ಆಡಳಿತಾವಧಿಯಲ್ಲಿ ಭಯೋತ್ಪಾದನೆ ಶಂಕಿತರಿಗೆ ಕ್ರೂರವಾದ ತನಿಖಾ ವಿಧಾನಗಳನ್ನು ಪ್ರಯೋಗಿಸಿದ ಸಿಐಎ ಏಜಂಟರ ಮೇಲೆ ಕ್ರಮ ಜರುಗಿಸುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಹೇಳುವ ಮೂಲಕ ವಿವಿಧ ವಲಯಗಳಿಂದ ಟೀಕೆಗಳನ್ನು ಎದುರಿಸಿದ್ದಾರೆ. ನಿದ್ರೆ ನಿರಾಕರಣೆ ಮತ್ತು ಮುಳುಗಿಸಿ ಉಸಿರುಕಟ್ಟಿಸುವಂತ ಚಿತ್ರಹಿಂಸೆ ವಿಧಾನಗಳಿಗೆ ಅಧಿಕಾರ ವಹಿಸಿಕೊಂಡ ಮೊದಲವಾರದಲ್ಲೇ ಒಬಾಮಾ ನಿಷೇಧ ಹೇರಿದ್ದರು.
ಬುಷ್ ಆಡಳಿತದಲ್ಲಿ ಸಿಐಎ ಬಳಸಿದ ನಾಲ್ಕು ವಿಧಾನಗಳ ವಿವರಗಳನ್ನು ಅವರೀಗ ಬಿಡುಗಡೆ ಮಾಡಿದ್ದಾರೆ. ಒಬಾಮಾ ಅವರ ನಿರ್ಧಾರವನ್ನು ಬಲಪಂಥೀಯ ಸಂಘಟನೆಗಳು ಟೀಕಿಸಿದ್ದು, ಕ್ರೂರವಾದ ತನಿಖಾ ವಿಧಾನಗಳಲ್ಲಿ ಭಾಗಿಯಾದ ಸಿಐಎ ಏಜೆಂಟರನ್ನು ರಕ್ಷಿಸುವ ಕ್ರಮವಾಗಿಯೆಂದು ಟೀಕಿಸಿವೆ.ಚಿತ್ರಹಿಂಸೆಯ ಕೃತ್ಯಗಳಲ್ಲಿ ಭಾಗಿಯಾದವರಿಗೆ 'ಜೈಲಿನಿಂದ ಹೊರಹೋಗುವ ಉಚಿತ ಕಾರ್ಡ್'ಗಳನ್ನು ನ್ಯಾಯ ಇಲಾಖೆ ವಿತರಿಸಲು ಹೊರಟಿದೆಯೆಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಆರೋಪಿಸಿದೆ.
ಭಯೋತ್ಪಾದನೆ ಕುರಿತ ಯುದ್ಧದಲ್ಲಿ ಬಂಧಿಗಳಾದವರ ಕಾನೂನು ಹಕ್ಕುಗಳ ರಕ್ಷಣೆಗೆ ಕಟಿಬದ್ಧವಾದ ಸಂವಿಧಾನಿಕ ಹಕ್ಕುಗಳ ಕೇಂದ್ರವು ಕೂಡ ಒಬಾಮಾ ಕ್ರಮಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿದೆ. |