ಮೂಲಭೂತವಾದಿ ಧರ್ಮಗುರು ಅಬ್ದುಲ್ ಅಜೀಜ್ ಪಾಕಿಸ್ತಾನ ರಾಜಧಾನಿಯ ಹೃದಯಭಾಗದ ಲಾಲ್ ಮಸ್ಜೀದ್ ಮಸೀದಿಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಹಿಂತಿರುಗಿದ್ದಾನೆ. ಲಾಲ್ ಮಸ್ಜೀದ್ ಮಸೀದಿಯಲ್ಲಿ ಅಡಗಿದ್ದ ಉಗ್ರರನ್ನು ಹೊರಕ್ಕಟ್ಟಲು ಸೇನೆಯ ಕಾರ್ಯಾಚರಣೆ ವಿರುದ್ಧ ಅಬ್ದುಲ್ ಅಜೀಜ್ ಪ್ರತಿಭಟನೆ ವ್ಯಕ್ತಪಡಿಸಿದ್ದ. ಸೇನೆ ಕಾರ್ಯಾಚರಣೆ ಬಳಿಕ ರಕ್ತದೋಕುಳಿ ಹರಿದು ಸುಮಾರು 100 ಜನರು ಪ್ರಾಣತೆತ್ತಿದ್ದರು.
ರಾಷ್ಟ್ರಾದ್ಯಂತ ಇಸ್ಲಾಮಿಕ್ ಕಾನೂನು ಜಾರಿಗೆ ತನ್ನ ಆಂದೋಳನ ಮುಂದುವರಿಸುವುದಾಗಿ ಅವನು ಶಪಥ ತೊಟ್ಟಿದ್ದಾನೆ. ಒಂದು ವರ್ಷಕ್ಕಿಂತ ಹೆಚ್ಚು ಕಾಲ ಬಂಧಿಯಾಗಿದ್ದರೂ, ಧೈರ್ಯಕುಂದದಂತೆ ಕಂಡುಬಂದ ಅಜೀಜ್, ವಾಹನವೊಂದರಲ್ಲಿ ಮಸೀದಿಗೆ ತೆರಳಿದಾಗ ಸಾವಿರಾರು ಬೆಂಬಲಿಗರು ಮತ್ತು ಮದ್ರಸಾ ವಿದ್ಯಾರ್ಥಿಗಳು ಸ್ವಾಗತಿಸಿದರು. ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವನು, ಪಾಕಿಸ್ತಾನದಲ್ಲಿ ಮಾತ್ರವಲ್ಲದೇ ಇಡೀ ಜಗತ್ತಿನಲ್ಲಿ ಇಸ್ಲಾಮಿಕ್ ಕಾನೂನು ಅಥವಾ ಷರಿಯತ್ ಜಾರಿಗೆ ಹೋರಾಟ ಮುಂದುವರಿಸುವುದಾಗಿ ತಿಳಿಸಿದ.
ಪಾಕಿಸ್ತಾನವು ಧಾರ್ಮಿಕ ತೀವ್ರವಾದ ಮತ್ತು ಹಿಂಸಾಚಾರಕ್ಕೆ ಜಾರಲು ಲಾಲ್ ಮಸ್ಜೀದ್ ಮುತ್ತಿಗೆ ತಿರುವು ನೀಡಿತೆಂದು ಹೇಳಲಾಗಿದೆ. ಮಸೀದಿಯೊಳಗಿದ್ದ ಶಸ್ತ್ರಸಜ್ಜಿತ ಉಗ್ರರು ಶರಣಾಗಲು ನಿರಾಕರಿಸಿದ್ದರಿಂದ ಭದ್ರತಾಪಡೆಗಳು ಸಂಕೀರ್ಣಕ್ಕೆ ಮುತ್ತಿಗೆ ಹಾಕಿದವು. ಈ ಸಂಘರ್ಷದಲ್ಲಿ 11 ಭದ್ರತಾ ಸಿಬ್ಬಂದಿ ಸೇರಿದಂತೆ 100 ಜನರು ಅಸುನೀಗಿದ್ದರು. |