ಶ್ರೀಲಂಕಾ ಉತ್ತರದಲ್ಲಿ ಕದನವಿರಾಮಕ್ಕೆ ಅಂತಾರಾಷ್ಟ್ರೀಯ ಸಮುದಾಯ ಕರೆನೀಡಿರುವ ನಡುವೆ, ಉನ್ನತ ವಿಶ್ವಸಂಸ್ಥೆ ಅಧಿಕಾರಿ ಮತ್ತು ಹಿರಿಯ ರಾಜತಾಂತ್ರಿಕ ವಿಜಯ್ ನಂಬಿಯಾರ್ ಶುಕ್ರವಾರ ಅಧ್ಯಕ್ಷ ಮಹೀಂದ್ರ ರಾಜಪಕ್ಷೆ ಅವರನ್ನು ಭೇಟಿ ಮಾಡಿ, ಯುದ್ಧವಲಯದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರ ಸಂಕಷ್ಟ ಮತ್ತು ಅವರನ್ನು ಪಾರು ಮಾಡುವ ವಿಧಾನವನ್ನು ಕುರಿತು ಚರ್ಚಿಸಿದರು.
ಎರಡು ದಿನಗಳ ಭೇಟಿ ಸಲುವಾಗಿ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಸಿಬ್ಬಂದಿ ಮುಖ್ಯಸ್ಥರಾದ ನಂಬಿಯಾರ್, ಗುರುವಾರ ಸಂಜೆ ಕೊಲಂಬೊಗೆ ಆಗಮಿಸಿದ್ದರು. ರಾಜಪಕ್ಷೆ ಜತೆ ಭೋಜನಕೂಟದ ಸಭೆ ಬಗ್ಗೆ ಅಧಿಕಾರಿಗಳು ಪ್ರಶ್ನೆಗಳಿಂದ ನುಣುಚಿಕೊಂಡರು. ಆದರೆ ತಮಿಳು ನಾಗರಿಕರ ಸಂಕಷ್ಟಗಳ ಬಗ್ಗೆ ಆತಂಕಿತರಾಗಿರುವುದಾಗಿ ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಪುದುಕುಡಿಯರುಪ್ಪುನ ಎಲ್‌ಟಿಟಿಇ ಹಿಡಿತದ ಪ್ರದೇಶದಲ್ಲಿ ಸುಮಾರು 40,000 ಮಂದಿ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವ ಕುರಿತು ನಂಬಿಯಾರ್ ರಾಜಪಕ್ಷೆ ಜತೆ ಮಾತುಕತೆ ನಡೆಸಿದರೆಂದು ತಿಳಿದುಬಂದಿದೆ.ನಾಗರಿಕರು ಗುಂಡು ನಿರೋಧಕ ವಲಯದಿಂದ ಸರ್ಕಾರಿ ನಿಯಂತ್ರಿತ ಪ್ರದೇಶಗಳಿಗೆ ತೆರಳುವುದಕ್ಕೆ ನೆರವು ನೀಡುವುದಾಗಿ ವಿಶ್ವಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಶ್ರೀಲಂಕಾ ಸರ್ಕಾರ ಈಗಾಗಲೇ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿದ್ದು, ವಿಶ್ವಸಂಸ್ಥೆಯ ನೆರವು ನಾಗರಿಕರ ತೆರವು ಪ್ರಕ್ರಿಯೆ ಚುರುಕುಗೊಳ್ಳುತ್ತದೆಂದು ಅದು ಹೇಳಿದೆ. |