ಉತ್ತರ ಕೊರಿಯ ಆಡಳಿತ ತನ್ನ ಪರಮಾಣು ಕಾರ್ಯಕ್ರಮ ತಪಾಸಣೆಗೆ ನೇಮಕವಾದ ಅಮೆರಿಕದ ತಪಾಸಕರನ್ನು ದೇಶ ತ್ಯಜಿಸುವಂತೆ ಆದೇಶಿಸಿದ ಬಳಿಕ ಅಮೆರಿಕದ ತಪಾಸಕರು ಕಮ್ಯುನಿಸ್ಟ್ ರಾಷ್ಟ್ರದಿಂದ ನಿರ್ಗಮಿಸಿದ್ದಾರೆ. ರಾಕೆಟ್ ಉಡಾವಣೆ ಕುರಿತಂತೆ ವಿಶ್ವಸಂಸ್ಥೆ ಟೀಕೆಯಿಂದ ಆಕ್ರೋಶಗೊಂಡ ಉತ್ತರಕೊರಿಯ ತನ್ನ ಪರಮಾಣು ಸ್ಥಾವರ ಪುನಾರಂಭಿಸುವುದಾಗಿ ಶಪಥ ತೊಟ್ಟಿದೆ.
ವ್ಯೋಂಗ್‌ಯಾಂಗ್‌ನಿಂದ ಬೀಜಿಂಗ್‍ಗೆ ವಿಮಾನದಲ್ಲಿ ಆಗಮಿಸಿದ ನಾಲ್ವರು ಅಮೆರಿಕನ್ನರು ಶುಕ್ರವಾರ ವರದಿಗಾರರ ಜತೆ ಮಾತನಾಡಲು ನಿರಾಕರಿಸಿದರು. ವಿಶ್ವಸಂಸ್ಥೆಯ ಪರಮಾಣು ತಪಾಸಕರು ದೇಶ ತ್ಯಜಿಸಿದ ಮರುದಿನವೇ ಅವರು ನಿರ್ಗಮಿಸಿದ್ದು, ಒಬ್ಬರು ಅಮೆರಿಕದ ಅಧಿಕಾರಿ ವ್ಯೋಂಗ್‌ಯಾಂಗ್‌ನಲ್ಲಿ ಉಳಿದಿದ್ದು ಶನಿವಾರ ಅಲ್ಲಿಂದ ತೆರಳಲಿದ್ದಾರೆಂದು ವಿದೇಶಾಂಗ ಇಲಾಖೆ ತಿಳಿಸಿದೆ.
ಎಲ್ಲ ಅಂತಾರಾಷ್ಟ್ರೀಯ ತಪಾಸಕರು ಉ.ಕೊರಿಯ ತ್ಯಜಿಸಿದ್ದರಿಂದ ಉತ್ತರ ಕೊರಿಯದ ಪರಮಾಣು ಸೌಲಭ್ಯಗಳ ಬಗ್ಗೆ ನಿಗಾವಹಿಸಲು ಯಾವುದೇ ತಪಾಸಕರಿಲ್ಲದ ಸ್ಥಿತಿ ಉದ್ಭವಿಸಿದೆ. ಉತ್ತರ ಕೊರಿಯ ಪರಮಾಣು ಸ್ಥಾವರ ಪುನಾರಂಭವಾದರೆ ಶಸ್ತ್ರಾಸ್ತ್ರ ದರ್ಜೆಯ ಪ್ಲುಟೋನಿಯಂ ತಯಾರಿಸಬಹುದೆಂಬ ಆತಂಕ ಕವಿದಿದೆ.
ಉತ್ತರ ಕೊರಿಯದ ರಾಕೆಟ್ ಉಡಾವಣೆಯು ಖಂಡಾಂತರ ಕ್ಷಿಪಣಿ ಸಂಬಂಧಿತ ಚಟುವಟಿಕೆಯಿಂದ ನಿಷೇಧಿಸಿದ ನಿರ್ಣಯಗಳ ಉಲ್ಲಂಘನೆಯೆಂದು ವಿಶ್ವಸಂಸ್ಥೆ ಭದ್ರತಾಮಂಡಳಿ ಟೀಕಿಸಿದ ಹಿನ್ನೆಲೆಯಲ್ಲಿ ಉತ್ತರ ಕೊರಿಯ ತನ್ನ ಪರಮಾಣು ಕಾರ್ಯಕ್ರಮ ಮುಂದುವರಿಕೆಗೆ ಶಪಥ ತೊಟ್ಟು 6 ರಾಷ್ಟ್ರಗಳ ನಿಶ್ಶಸ್ತ್ರೀಕರಣ ಮಾತುಕತೆಯನ್ನು ತ್ಯಜಿಸಿತ್ತು. |