ಅಕ್ರಮ ಸಂಬಂಧ ಹೊಂದಿದ ಆರೋಪದ ಮೇಲೆ ತಾಲಿಬಾನ್ ಉಗ್ರಗಾಮಿಗಳು ಒಬ್ಬ ಪುರುಷ ಮತ್ತು ಮಹಿಳೆಗೆ ಸಾರ್ವಜನಿಕವಾಗಿ ಮರಣದಂಡನೆ ಶಿಕ್ಷೆ ನೀಡಿದ ಅಮಾನುಷ ಘಟನೆ ನಡೆದಿದೆ.
ವಾಯವ್ಯ ಪಾಕಿಸ್ತಾನದ ಹಾಂಗು ಜಿಲ್ಲೆಯಲ್ಲಿ ಸಂಬಂಧಿಗಳ ಎದುರೇ ಕಲಾಶ್ನಿಕೋವ್ ಬಂದೂಕಿನಿಂದ ಗುಂಡು ಹಾರಿಸಿ ತಾಲಿಬಾನಿಗಳು ಅವರಿಬ್ಬರನ್ನು ಕೊಂದರು. ಕೆಲವು ದಿನಗಳ ಹಿಂದೆ ಒರ್ಕಾಜಾಯ್ ಗಡಿಯ ಬಳಿ ನಡೆದ ಶೂಟಿಂಗ್ ಘಟನೆಯ ಆಘಾತಕಾರಿ ವಿಡಿಯೊ ಚಿತ್ರವು ಮಾಧ್ಯಮಗಳಿಗೆ ಶುಕ್ರವಾರ ಲಭ್ಯವಾಗಿದೆಯೆಂದು ಡಾನ್ ಸುದ್ದಿ ಚಾನೆಲ್ ತಿಳಿಸಿದೆ.
ವಿಡಿಯೊ ಚಿತ್ರದಲ್ಲಿ 40 ವರ್ಷ ಪ್ರಾಯದ ಪುರುಷ ಮತ್ತು 45 ವರ್ಷಗಳ ಪ್ರಾಯದ ಮಹಿಳೆಗೆ ಅವರ ಬಂಧುಗಳು ಮತ್ತು ದೊಡ್ಡ ಜನರ ಗುಂಪಿನ ಸಮ್ಮುಖದಲ್ಲೇ ತೆರೆದ ಪ್ರದೇಶದಲ್ಲಿ ಶೂಟ್ ಮಾಡುತ್ತಿರುವ ದೃಶ್ಯ ತೋರಿಸಿದೆ.ಮಹಿಳೆಯು ತಾಲಿಬಾನಿಗಳಿಗೆ ದಯವಿಟ್ಟು ಕರುಣೆ ತೋರಿಸುವಂತೆ, ತನ್ನ ಮೇಲೆ ಆರೋಪ ಸುಳ್ಳೆಂದು ಅಂಗಲಾಚುತ್ತಿರುವ ದೃಶ್ಯವಿದೆ.
ಉಗ್ರಗಾಮಿಗಳು ಮೊದಲಿಗೆ ಮಹಿಳೆಯ ಎದೆಗೆ ಎರಡು ಗುಂಡುಗಳನ್ನು ಹೊಡೆದರು. ಬಳಿಕ ಕಲಾಶ್ನಿಕೋವ್ ಬಂದೂಕಿನಿಂದ ಮಹಿಳೆ ಮತ್ತು ಪುರುಷನ ಮೇಲೆ ಗುಂಡಿನ ಸುರಿಮಳೆ ಸುರಿಸಿದರು. ಮಹಿಳೆ ಇನ್ನೂ ಉಸಿರಾಡುತ್ತಿದ್ದುದನ್ನು ಕಂಡು, ಇನ್ನೂ ಜೀವಂತವಿದ್ದಾಳೆಂದು ತಾಲಿಬಾನಿಗಳು ಕಿರುಚಿ ಕೊಲ್ಲುವಂತೆ ಆದೇಶಿಸಿದರು.
ತಾಲಿಬಾನ್ ಮಹಿಳೆ ಮತ್ತು ಪುರುಷರ ಬಂಧುಗಳಿಗೆ ನಿರ್ದಿಷ್ಟ ಜಾಗದಲ್ಲಿ ಕರೆತರುವಂತೆ ಆದೇಶಿಸಿದರು. ಬಂಧುಗಳು ತಾಲಿಬಾನ್ ಇರುವಲ್ಲಿಗೆ ಇಬ್ಬರನ್ನೂ ಕರೆತಂದ ಬಳಿಕ ಹಾಡಹಗಲೇ ಅವರ ಮೇಲೆ ತಾಲಿಬಾನಿಗಳು ಗುಂಡು ಹಾರಿಸಿ ಕೊಂದರೆಂದು ಹೇಳಲಾಗಿದೆ. |