ವಿಶ್ವಸಂಸ್ಥೆ ಮತ್ತು ವಿದೇಶಿ ಸರ್ಕಾರಗಳು ನಾಗರಿಕರ ಜೀವ ಅಪಾಯಕ್ಕೊಡ್ಡುವ ಶ್ರೀಲಂಕಾ ಸರ್ಕಾರದ ಮಿಲಿಟರಿ ಕಾರ್ಯಾಚರಣೆಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆಂದು ಶ್ರೀಲಂಕಾ ತಮಿಳು ವ್ಯಾಘ್ರಗಳು ಬಂಡುಕೋರರ ಪರ ವೆಬ್‌ಸೈಟ್‌ನಲ್ಲಿ ಟೀಕಿಸಿವೆ.
ಸಂಘರ್ಷ ವಲಯದಲ್ಲಿ ನಾಗರಿಕರನ್ನು ತಮಿಳು ಬಂಡುಕೋರರು ಒತ್ತೆಯಿರಿಸಿದ್ದಾರೆಂದು ಆಪಾದಿಸಿರುವುದು ಕೊಲಂಬೊ ಅಂತಿಮ ಪ್ರಹಾರಕ್ಕೆ ಮಾಡಿಕೊಳ್ಳುತ್ತಿರುವ ಸಿದ್ಧತೆಗೆ ಅವು ಬೆಂಬಲ ಸೂಚಿಸಿದ್ದರ ಸಂಕೇತವಾಗಿದೆ ಎಂದು ತಮಿಳ್‌ನೆಟ್.ಕಾಂ ತಿಳಿಸಿದೆ.
'ಅಂತಾರಾಷ್ಟ್ರೀಯ ಸಮುದಾಯ ಸರ್ಕಾರದ ಕಾರ್ಯಾಚರಣೆ ವಿರುದ್ಧ ನಿರ್ಲಕ್ಷ್ಯ ವಹಿಸಿದೆ. ಭಾರತ ಕಾರ್ಯಾಚರಣೆಗೆ ಕುಮ್ಮಕ್ಕು ನೀಡುತ್ತಿದೆ, ಅಂತಾರಾಷ್ಟ್ರೀಯ ಮಾಧ್ಯಮಗಳು ಕರ್ತವ್ಯದಲ್ಲಿ ವಿಫಲವಾಗಿರುವಾಗಿರುವಾಗ ನಾಗರಿಕ ಹತ್ಯಾಕಾಂಡ ಮತ್ತು ಸ್ವಾಧೀನ ಸುಲಭವಾಗಿ ಮುಗಿಯುತ್ತದೆ' ಎಂದು ವೆಬ್‌ಸೈಟ್ ಹೇಳಿದೆ. ವಿಶ್ವಸಂಸ್ಥೆ ಮುಖ್ಯಸ್ಥ ಬಾನ್ ಕಿ ಮೂನ್ ಯುದ್ಧವಲಯದಲ್ಲಿ ಸಿಕ್ಕಿಬಿದ್ದಿರುವ ನಾಗರಿಕರ ಸಂಕಷ್ಟ ಶಮನದ ಪ್ರಯತ್ನಕ್ಕೆ ಶ್ರೀಲಂಕಾಗೆ ಉನ್ನತಾಧಿಕಾರಿಯನ್ನು ಕಳಿಸಿರುವ ಮಧ್ಯೆ, ವೆಬ್‌ಸೈಟ್ ವರದಿ ಪ್ರಕಟವಾಗಿದೆ.
ಕದನವಿರಾಮ ಸಂದರ್ಭದಲ್ಲಿ ನಾಗರಿಕರ ನಿರ್ಗಮನಕ್ಕೆ ಎಲ್‌ಟಿಟಿಇ ರಚನಾತ್ಮಕವಾಗಿ ಸ್ಪಂದಿಸಿದಂತೆ ಕಾಣುತ್ತಿಲ್ಲ ಎಂದು ವಿಶ್ವಸಂಸ್ಥೆ ವಕ್ತಾರ ಫರ್ಹಾನ್ ಹಕ್ ನ್ಯೂಯಾರ್ಕ್‌ನಲ್ಲಿ ತಿಳಿಸಿದ್ದಾರೆ. 'ಇದು ನಿಜಕ್ಕೂ ನಿರಾಶಾದಾಯಕವಾಗಿದ್ದು, ಹಿಂಸೆಯ ಪ್ರದೇಶದಿಂದ ನಿರ್ಗಮಿಸಲು ನಾಗರಿಕರಿಗೆ ಅವಕಾಶ ನೀಡಬೇಕು. ಅವರನ್ನು ರಾಜಕೀಯ ಅಥವಾ ಮಿಲಿಟರಿ ತಂತ್ರಕ್ಕೆ ಗುರಿಯಾಗಿಸಬಾರದು' ಎಂದು ಅವರು ಹೇಳಿದ್ದಾರೆ. |