ದಕ್ಷಿಣ ಬಾಂಗ್ಲಾದೇಶದಲ್ಲಿ ಚಂಡಮಾರುತ 'ಬಿಜ್ಲಿ' ಶುಕ್ರವಾರ ರಾತ್ರಿ ಅಪ್ಪಳಿಸಿದ್ದು, ರಾಷ್ಟ್ರದ ಕೆಳಪ್ರದೇಶಗಳಿಂದ ಸಾವಿರಾರು ನಿವಾಸಿಗಳ ತೆರವಿಗೆ ಸರ್ಕಾರ ಆದೇಶಿಸಿದೆ. ಗಂಟೆಗೆ 90 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದ್ದು, ಶುಕ್ರವಾರ ರಾತ್ರಿಯಿಂದ ಈಶಾನ್ಯಮುಖಿಯಾಗಿ ಚಲಿಸಿದೆಯೆಂದು ಆಗ್ನೇಯ ಬಾಂಗ್ಲಾದೇಶ ನಗರ ಚಿತ್ತಗಾಂಗ್‌ನಲ್ಲಿ ಹವಾಮಾನ ಅಧಿಕಾರಿ ಅಸಾದುರ್ ರೆಹಮಾನ್ ತಿಳಿಸಿದ್ದಾರೆ.
ಬಿಜ್ಲಿ ಚಂಡಮಾರುತ ಹೆಚ್ಚು ಹಾನಿವುಂಟು ಮಾಡುವ ನಿರೀಕ್ಷೆಯಿಲ್ಲ ಎಂದು ಅಧಿಕಾರಿಗಳು ಹೇಳಿರುವ ನಡುವೆ, ಬಿರುಗಾಳಿ ದುರ್ಬಲವಾಗುವಂತೆ ಕಾಣುತ್ತಿದೆಯೆಂದು ಕೆಲವರು ಹೇಳಿದ್ದಾರೆ. ಚಂಡಮಾರುತವು ಚಿತ್ತಗಾಂಗ್ ದಕ್ಷಿಣ ತೀರ ಜಿಲ್ಲೆಗಳು ಮತ್ತು ಕಾಕ್ಸ್‌ಬಜಾರ್ ಹಾದು ಬಾಂಗ್ಲಾದೇಶದಿಂದ ಶನಿವಾರ ಮುಂಜಾನೆ ದೂರ ತೆರಳುವುದೆಂದು ನಿರೀಕ್ಷಿಸಲಾಗಿದೆ. ಚಂಡಮಾರುತ ತ್ರಿಪುರಾದ ದಿಕ್ಕಿನಲ್ಲಿ ಚಲಿಸುತ್ತಿದೆಯಂದು ವರದಿ ತಿಳಿಸಿದೆ.
ಶನಿವಾರ ಮಧ್ಯಾಹ್ನದವರೆಗೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೆ ಮತ್ತು ಕಾರ್ಯಕರ್ತರಿಗೆ ಆಹಾರ ಮತ್ತು ಹಾನಿ ನಿರ್ವಹಣೆ ಸಚಿವ ಅಬ್ದುಲ್ ರಜಾಕ್ ಆದೇಶಿಸಿದ್ದಾರೆ. ಚಂಡಮಾರುತ ನರ್ಗೀಸ್ ವಿನಾಶ ಸೃಷ್ಟಿಸಿದ ಪ್ರಥಮ ವಾರ್ಷಿಕಕ್ಕೆ ಎರಡು ವಾರಗಳ ಮುಂಚೆ ಬಿರುಗಾಳಿಯ ಮುನ್ನೆಚ್ಚರಿಕೆ ನೀಡಲಾಗಿದೆ.
ಕಳೆದ ಮೇ 2ರಂದು ಅಪ್ಪಳಿಸಿದ ನರ್ಗೀಸ್ ಬತ್ತ ಬೆಳೆಯುವ ಪ್ರದೇಶದಲ್ಲಿ ವ್ಯಾಪಕ ಹಾನಿವುಂಟುಮಾಡಿ, ಸುಮಾರು 140,000 ಜನರನ್ನು ಬಲಿತೆಗೆದುಕೊಂಡಿತ್ತು. 'ಬಿಜ್ಲಿ' ಚಂಡಮಾರುತದ ಹಿನ್ನೆಲೆಯಲ್ಲಿ ಸಾವಿರಾರು ಜನರನ್ನು ಶಾಲೆಗಳು, ಮಸೀದಿಗಳು, ಸರ್ಕಾರಿ ಕಚೇರಿಗಳು ಮತ್ತು 80 ಚಂಡಮಾರುತ ಆಶ್ರಯತಾಣಗಳಾದ ಕಾಂಕ್ರೀಟ್ ಪೆಟ್ಟಿಗೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಮೊಹೆಶ್ಕಾಲಿ ದ್ವೀಪದ ಮುಖ್ಯ ಸರ್ಕಾರಿ ಅಧಿಕಾರಿ ತಿಳಿಸಿದ್ದಾರೆ. ಮೊಹಶ್ಕಾಲಿಯಲ್ಲಿ ಸುಮಾರು 3.50,000 ಜನರು ವಾಸವಿದ್ದಾರೆ. |