ಗ್ವಾಂಟೆನಾಮೊ ಬೇ ಬಂಧನ ಶಿಬಿರಗಳಲ್ಲಿ ಸೆರೆಯಿಟ್ಟ ಬಹುತೇಕ ಪಾಕಿಸ್ತಾನ ಭಯೋತ್ಪಾದಕ ಶಂಕಿತರನ್ನು ಪಾಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮಾಧ್ಯಮವೊಂದರ ವರದಿ ತಿಳಿಸಿದೆ. ಕುಖ್ಯಾತ ಬಂಧನ ಶಿಬಿರದಲ್ಲಿ ಬಂಧಿಯಾದ 71 ಪಾಕಿಸ್ತಾನಿಯರಲ್ಲಿ, 63 ಜನರನ್ನು ಪಾಕಿಸ್ತಾನಕ್ಕೆ ಸ್ಥಳಾಂತರಿಸಲಾಗಿದ್ದು, 8 ಮಂದಿ ಇನ್ನೂ ಅಲ್ಲೇ ಕೊಳೆಯುತ್ತಿದ್ದಾರೆ.
ಅಬ್ದುಲ್ ರೆಹ್ಮಾನ್, ಅಲಿ ಅಬ್ದುಲ್ ಅಜೀಜ್, ಮಜೀದ್ ಖಾನ್, ಸೈಫುಲ್ಲಾ ಪರಾಚಾ ಮತ್ತು ಖಲೀದ್ ಷೇಕ್ ಮುಹಮ್ಮದ್ 8 ಪಾಕಿಸ್ತಾನಿಯರಲ್ಲಿ ಸೇರಿದ್ದು, ಗ್ವಾಂಟೆನಾಮೊ ಬೇನಲ್ಲಿ ಇನ್ನೂ ಬಂಧಿಯಾಗಿದ್ದಾರೆಂದು ವರದಿ ತಿಳಿಸಿದೆ. ಮುಹಮ್ಮದ್ ಅಮೆರಿಕದಲ್ಲಿ 9/11 ದಾಳಿಯ ಸೂತ್ರದಾರನೆಂದು ಹೇಳಲಾಗಿದೆ.
ಅಮೆರಿಕದ ರಕ್ಷಣಾ ಇಲಾಖೆಯ ಕೈದಿಗಳ ಪಟ್ಟಿಯನ್ನು ಉದಾಹರಿಸಿ, ಆರಂಭದಲ್ಲಿ 49 ರಾಷ್ಟ್ರಗಳಿಂದ 779 ಕೈದಿಗಳನ್ನು ಬಂಧೀಖಾನೆಗೆ ತರಲಾಯಿತು. ಅವರಲ್ಲಿ 533 ಮಂದಿಯನ್ನು ಅವರವರ ರಾಷ್ಟ್ರಗಳಿಗೆ ಕಳುಹಿಸಲಾಯಿತು ಮತ್ತು ಇನ್ನೂ 241 ಜನರು ಗ್ವಾಂಟೆನಾಮೊ ಬೇನಲ್ಲಿ ಇದ್ದಾರೆಂದು ವರದಿ ಹೇಳಿದೆ. |