ಇಸ್ಲಾಮ್ ಧರ್ಮದಲ್ಲಿ ಪ್ರಜಾಪ್ರಭುತ್ವಕ್ಕೆ ಜಾಗವಿಲ್ಲ ಮತ್ತು ಅದು ಕುರಾನ್‌ಗೆ ಅತಿಕ್ರಮಣವಾಗಿದೆ ಎಂದು ಪಾಕಿಸ್ತಾನದ ವಾಯವ್ಯ ಸ್ವಾತ್ ಕಣಿವೆಯಲ್ಲಿ ಷರಿಯತ್ ಕಾನೂನಿನ ಜಾರಿಗೆ ಪ್ರಮುಖ ಪಾತ್ರವಹಿಸಿದ ತೀವ್ರವಾದಿ ಧರ್ಮಗುರು ಸೂಫಿ ಮಹಮ್ಮದ್ ಭಾನುವಾರ ಹೇಳಿದ್ದಾನೆ.
ಸ್ವಾತ್ ಕಣಿವೆಯ ಮಿಂಗೋರಾ ಜಿಲ್ಲೆಯಲ್ಲಿ ಸಾವಿರಾರು ಜನರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ನಿಷೇಧಿತ ಟಿಎನ್‌ಎಸ್‌ಎಂ ಮುಖ್ಯಸ್ಥ ಪ್ರಜಾಪ್ರಭುತ್ವವನ್ನು ಇಸ್ಲಾಂ ವಿರೋಧಿ ವ್ಯವಸ್ಥೆಯೆಂದು ಟೀಕಿಸಿದ್ದಾನೆ.
ಪ್ರಸಕ್ತ ರಾಜಕೀಯ ವ್ಯವಸ್ಥೆಯು ಇಸ್ಲಾಮ್ ಮತ್ತು ಕುರಾನ್ ಉಲ್ಲಂಘನೆಯಾಗಿದೆಯೆಂದು ಪ್ರತಿಪಾದಿಸಿದ್ದಾನೆ.ಸ್ಲಾಮಿಕ್ ವ್ಯವಸ್ಥೆಯಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವಿಲ್ಲ ಎಂದು ಪ್ರತಿಪಾದಿಸಿದ ಅವನು, ರಾಷ್ಟ್ರದ ಮೇಲೆ 'ಕಾಫಿರ್' ವ್ಯವಸ್ಥೆಯನ್ನು ಹೇರುವ ಮೂಲಕ ಪಾಶ್ಚಿಮಾತ್ಯರ ಓಲೈಕೆ ಮಾಡುವ ಪಾಕಿಸ್ತಾನ ಆಡಳಿತಗಾರರ ವಿರುದ್ಧ ಕಿಡಿಕಾರಿದ್ದಾನೆ.
ಷರಿಯತ್ ಅಥವಾ ಇಸ್ಲಾಮಿಕ್ ಕಾನೂನನ್ನು ಮಲಕಾಂಡ್ ವಿಭಾಗದಲ್ಲಿ ಜಾರಿಗೆ ತರುವ ಪ್ರಯತ್ನ ಈಗ ಫಲ ನೀಡುತ್ತಿದೆಯೆಂದು ಅವನು ಹೇಳಿದ್ದಾನೆ.ಷರಿಯತ್ ಕಾನೂನಿನ ಜಾರಿಗೆ ಅಧ್ಯಕ್ಷ ಜರ್ದಾರಿ ಅನುಮೋದನೆ ನೀಡಲು ಮುಂಚಿತವಾಗಿ ಸ್ವಾತ್‌ನಲ್ಲಿ ಇಸ್ಲಾಮಿಕ್ ಕೋರ್ಟ್ ಅಥವಾ ಕಾಜಿ ನ್ಯಾಯಾಲಯಗಳನ್ನು ಸ್ಥಾಪಿಸಿದ ಧರ್ಮಗುರು, ಕಾಜಿ ಕೋರ್ಟ್ ವಿರುದ್ಧ ಸಿವಿಲ್ ಕೋರ್ಟ್‌ಗಳಲ್ಲಿ ಯಾವುದೇ ಅಫೀಲು ಮಾಡಲು ಸಾಧ್ಯವಿಲ್ಲವೆಂದು ಹೇಳಿದ್ದಾನೆ. ಷರಿಯತ್ ವ್ಯವಸ್ಥೆಯಲ್ಲಿ ಮೇಲಿನ ಕೋರ್ಟ್ ದರುಲ್ ಖಾಝಾದಲ್ಲಿ ಮಾತ್ರ ಅಫೀಲು ಸಲ್ಲಿಸಬಹುದು ಎಂದು ಅವನು ಹೇಳಿದ್ದಾನೆ. |