ಶ್ರೀಲಂಕಾದ ಯುದ್ಧವಲಯದಲ್ಲಿ ಸೇವೆಸಲ್ಲಿಸುತ್ತಿರುವ ಸರ್ಕಾರಿ ವೈದ್ಯರು ತೀವ್ರ ಬೇಸತ್ತಿದ್ದಾರೆಂದು ರೆಡ್‌ಕ್ರಾಸ್ ಅಂತಾರಾಷ್ಟ್ರೀಯ ಸಮಿತಿ ತಿಳಿಸಿದೆ. ಎಲ್‌ಟಿಟಿಇ ಮತ್ತು ಶ್ರೀಲಂಕಾ ಸರ್ಕಾರದ ನಡುವೆ ಕದನದಲ್ಲಿ ಗಾಯಗೊಂಡ ನೂರಾರು, ಸಾವಿರಾರು ಜನರ ಚಿಕಿತ್ಸೆಗೆ ಸಾಕಷ್ಟು ವೈದ್ಯಕೀಯ ಸಾಮಗ್ರಿಗಳ ಕೊರತೆಯಿಂದ ಅವರು ರೋಸಿಹೋಗಿದ್ದಾರೆಂದು ರೆಡ್ ಕ್ರಾಸ್ ತಿಳಿಸಿದೆ.
ಸುಮಾರು ಒಂದು ಲಕ್ಷ ತಮಿಳು ನಾಗರಿಕರು ಸಣ್ಣ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದು, ಆ ಪ್ರದೇಶದಲ್ಲಿ ತಮಿಳು ಬಂಡುಕೋರರು ಸೇನೆಯ ಜತೆ ಇನ್ನೂ ಸೆಣೆಸಾಟದಲ್ಲಿ ನಿರತರಾಗಿದ್ದಾರೆ. ಸೇನೆ, ಉಗ್ರರ ಸಂಘರ್ಷದಲ್ಲಿ ಸಿಕ್ಕಿಬಿದ್ದಿರುವ ಅವರ ಜೀವನ ದುಃಸ್ವಪ್ನವಾಗಿ ಪರಿಣಮಿಸಿದೆ. ತಿಂಗಳುಗಳ ಕಾಲದಿಂದ ಶೆಲ್ ದಾಳಿ ನಡೆಯುತ್ತಲೇ ಇದ್ದು, ಜನರು ತಪ್ಪಿಸಿಕೊಳ್ಳದಂತೆ ಬಂಡುಕೋರರು ತಡೆಯುತ್ತಿದ್ದಾರೆಂದು ವಿಶ್ವಸಂಸ್ಥೆ ಆಪಾದಿಸಿದೆ.
ಯುದ್ಧವಲಯದ ಭೂಭಾಗದ ಕಡೆಯಿಂದ ನಾಗರಿಕರು ತಪ್ಪಿಸಿಕೊಳ್ಳಲು ನೆರವು ನೀಡುವುದಕ್ಕೆ ರೆಡ್‌ಕ್ರಾಸ್‌ಗೆ ಸರ್ಕಾರ ಅವಕಾಶನೀಡುತ್ತಿಲ್ಲ. ಪುಟ್ಟುಮಟ್ಟಾಲನ್‌ನಲ್ಲಿ ಗಾಯಗೊಂಡವರನ್ನು ರೆಡ್ ಕ್ರಾಸ್ ಕಾರ್ಯಕರ್ತರು ಸಮುದ್ರ ಮಾರ್ಗವಾಗಿ ತೆರವು ಮಾಡುತ್ತಿದ್ದಾರೆ. ಹೀಗಾಗಿ, ಪ್ರತಿವಾರ ಎರಡು ಅಥವಾ ಮೂರು ಹಡಗುಗಳಲ್ಲಿ ರೋಗಗ್ರಸ್ಥ, ವೃದ್ಧ ಮತ್ತು ತೀವ್ರ ಗಾಯಗೊಂಡ 400-500 ಜನರನ್ನು ಒಯ್ಯಲು ಮಾತ್ರ ರೆಡ್‌ಕ್ರಾಸ್‌ಗೆ ಸಾಧ್ಯವಾಗುತ್ತಿದೆ. |