ವಾಯವ್ಯ ಪಾಕಿಸ್ತಾನದಲ್ಲಿ ತಾಲಿಬಾನ್ ನೆಲೆಯೊಂದರ ಮೇಲೆ ಗುರಿಯಿರಿಸಿ ಅಮೆರಿಕ ಕ್ಷಿಪಣಿ ದಾಳಿ ಮಾಡಿದೆ ಎಂದು ಸ್ಥಳೀಯ ಭದ್ರತಾ ಅಧಿಕಾರಿಗಳು ಹೇಳಿದ್ದಾರೆ. ಆಫ್ಘನ್ ಗಡಿಯ ಸಮೀಪ ದಕ್ಷಿಣ ವಾಜಿರಿಸ್ತಾನ ಬುಡಕಟ್ಟು ಪ್ರದೇಶದಲ್ಲಿರುವ ಉಗ್ರಗಾಮಿಗಳ ಮೇಲೆ ಗುರಿಯಿರಿಸಿ ಈ ದಾಳಿ ಮಾಡಲಾಗಿದೆ.
ಪ್ರಮುಖ ಉಗ್ರಗಾಮಿ ಬೈತುಲ್ಲಾ ಮಸೂದ್ ನೆಲೆಯೆಂದು ಹೇಳಲಾದ ಈ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ ಮೂವರು ಸತ್ತಿದ್ದು, ಐದು ಮಂದಿ ಗಾಯಗೊಂಡಿದ್ದಾಗಿ ದೃಢಪಡದ ವರದಿಗಳು ಹೇಳಿವೆ. ಆತ್ಮಾಹುತಿ ಕಾರ್ ಬಾಂಬರ್ ಪೊಲೀಸ್ ಚೆಕ್‌ಪಾಯಿಂಟ್ ಮೇಲೆ ದಾಳಿ ಮಾಡಿ 27 ಜನರನ್ನು ಕೊಂದ ಮಾರನೇದಿನವೇ ಕ್ಷಿಪಣಿ ದಾಳಿ ನಡೆದಿದೆ. ಪಾಕಿಸ್ತಾನದ ಗಡಿಪ್ರದೇಶದಲ್ಲಿ ನಡೆದ ಅನೇಕ ದಾಳಿಗಳಿಗೆ ಅಮೆರಿಕವೇ ಕಾರಣವೆನ್ನಲಾಗಿದ್ದು, ಭಾನುವಾರ ನಡೆದ ದಾಳಿಯನ್ನು ಅಮೆರಿಕ ದೃಢಪಡಿಸಿಲ್ಲ.
ಆದರೆ ಸ್ಥಳೀಯ ಆಡಳಿತಾಧಿಕಾರಿ ಅದು ಡ್ರೋನ್ ದಾಳಿಯೆಂದು ದೃಢಪಡಿಸಿದ್ದಾರೆ. ದಕ್ಷಿಣ ವಾಜಿರಿಸ್ತಾನ ತಾಲಿಬಾನ್ ಮತ್ತು ಅಲ್ ಖಾಯಿದಾ ಹೋರಾಟಗಾರರಿಗೆ ಸ್ವರ್ಗಸಮಾನವಾಗಿದ್ದು, ಅಮೆರಿಕ ಮತ್ತು ನ್ಯಾಟೊ ಪಡೆಗಳ ವಿರುದ್ಧ ಹೋರಾಡಲು ಇಲ್ಲಿನ ನೆಲೆಗಳಿಂದ ಆಫ್ಘಾನಿಸ್ತಾನಕ್ಕೆ ಪ್ರವೇಶಿಸುತ್ತಿವೆ. ಡ್ರೋನ್ ದಾಳಿಗಳ ಬಗ್ಗೆ ಪಾಕ್ ಖಂಡನೆಗೆ ಉತ್ತರಿಸಿರುವ ಅಮೆರಿಕ ಉಗ್ರಗಾಮಿ ಇರುವಿಕೆಯ ಬಗ್ಗೆ ಸ್ಪಷ್ಟ ಸುಳಿವು ಸಿಕ್ಕಿದ ಕೂಡಲೇ ತಾವು ಕಾರ್ಯೋನ್ಮುಖರಾಗುತ್ತೇವೆಂದು ತಿಳಿಸಿದೆ. ಆದರೆ ನಾಗರಿಕರು ದಾಳಿಗಳಿಗೆ ಹತರಾಗುತ್ತಿದ್ದು, ಸಾರ್ವಬೌಮತೆಯ ಉಲ್ಲಂಘನೆಯೆಂದು ಪಾಕಿಸ್ತಾನಿಗಳು ದೂರುತ್ತಿದ್ದಾರೆ. |