ಪಾಕಿಸ್ತಾನದ ವಾಯುವ್ಯ ಸ್ವಾತ್ ಕಣಿವೆಯಲ್ಲಿ ಕುಟುಂಬದಿಂದ ತಿರಸ್ಕೃತರಾದ ಜೋಡಿಗಳು ತಮಗಿಷ್ಟವಾದ ಸಂಗಾತಿಯ ಜತೆ ಪ್ರೇಮ ವಿವಾಹ ಮಾಡಿಕೊಳ್ಳುವುದರ ಸಲುವಾಗಿ ವಿಶೇಷ ಬ್ಯೂರೊವನ್ನು ತಾಲಿಬಾನ್ ಉಗ್ರಗಾಮಿಗಳು ಸ್ಥಾಪಿಸಿದ್ದಾರೆ.
ಶುಭಾ-ಎ-ಅರೂಸಾಟ್ ಎಂದು ಹೆಸರಾದ ಬ್ಯೂರೊಗೆ ತಾಲಿಬಾನ್ ಕಮಾಂಡರ್ ಅಬು ಅಮ್ಮದ್ ಮುಖ್ಯಸ್ಥನಾಗಿದ್ದು, ಕಳೆದ 9 ದಿನಗಳಲ್ಲಿ 11 ಪ್ರೇಮವಿವಾಹಗಳಿಗೆ ಅಧಿಕೃತ ಮುದ್ರೆ ಒತ್ತಿದ್ದಾನೆಂದು ಉಗ್ರಗಾಮಿ ವಕ್ತಾರ ಮುಸ್ಲಿಂ ಖಾನ್ ತಿಳಿಸಿದ್ದಾನೆ. ಇನ್ನೂ 300 ಯುವಕರು, ಯುವತಿಯರು ವಿವಾಹದ ಸರದಿಗಾಗಿ ಕಾಯುತ್ತಿದ್ದು, ಪ್ರೇಮ ವಿವಾಹ ಆಕಾಂಕ್ಷಿಗಳು ನಿಗದಿತ ದೂರವಾಣಿ ಸಂಖ್ಯೆ ಮೂಲಕ ಬ್ಯೂರೊವನ್ನು ಸಂಪರ್ಕಿಸಬಹುದೆಂದು ತಿಳಿದುಬಂದಿದೆ.
ನಮ್ಮನ್ನು ಸಂಪರ್ಕಿಸಿದ ಕುಟುಂಬ ಅಥವಾ ಯುವತಿಯರು ತಾಲಿಬಾನ್ ಉಗ್ರಗಾಮಿಯನ್ನು ವಿವಾಹವಾಗಲು ಇಚ್ಛಿಸಿರುವುದಾಗಿ ಖಾನ್ ಹೇಳಿದ್ದಾನೆ.
ತಾಲಿಬಾನಿಗಳೇ ತಮಗೆ ಬೇಕಾದ ಯುವತಿಯರನ್ನು ವಿವಾಹವಾಗಲು ಉಗ್ರಗಾಮಿ ಯುವಕರಿಗೆ ದಾರಿ ಸುಸೂತ್ರಗೊಳಿಸಿದ್ದಾರೆಂದು ವಿಶ್ಲೇಷಕರು ಇದನ್ನು ವ್ಯಾಖ್ಯಾನಿಸಿದ್ದಾರೆ.
ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಕ್ಕೆ ಛಡಿಯೇಟಿನ ಶಿಕ್ಷೆ ನೀಡಿದ ತಾಲಿಬಾನಿಗಳು ಅದೇ ಸಂದರ್ಭದಲ್ಲಿ ಯುವಜನರಿಗೆ ಇಷ್ಟಪಟ್ಟವರನ್ನು ವಿವಾಹವಾಗಲು ಹೇಗೆ ಅವಕಾಶ ನೀಡಿದ್ದಾರೆಂದು ಕೆಲವು ಜನರು ಪ್ರಶ್ನಿಸಿದ್ದಾರೆ. ತಾಲಿಬಾನ್ ಒಬ್ಬರ ಮುಖ ಒಬ್ಬರು ನೋಡದಂತೆ ಪ್ರೇಮಿಗಳಿಗೆ ನಿಷೇಧಿಸಿರುವಾಗ ಅವರು ವಿವಾಹದ ಪ್ರಸ್ತಾಪ ಮಂಡಿಸುವುದು ಹೇಗೆ ಸಾಧ್ಯವಾಗುತ್ತದೆಂದು ಮತ್ತೆ ಕೆಲವು ಜನರು ಪ್ರಶ್ನೆ ಎತ್ತಿದ್ದಾರೆ. |