ಎಲ್‌ಟಿಟಿಇ ಮುಖಂಡ ಪ್ರಭಾಕರನ್ ಶರಣಾಗುವುದಕ್ಕೆ 24 ಗಂಟೆಗಳ ಗಡುವನ್ನು ಶ್ರೀಲಂಕಾ ಅಧ್ಯಕ್ಷ ರಾಜಪಕ್ಷೆ ವಿಧಿಸಿದ್ದಾರೆ. 24 ಗಂಟೆಯೊಳಗೆ ಪ್ರಭಾಕರನ್ ಶರಣಾಗದಿದ್ದರೆ ತಮ್ಮ ಪಡೆಗಳು ಅಂತಿಮ ಪ್ರಹಾರ ನೀಡಲಿದೆಯೆಂದು ಅವರು ಹೇಳಿದ್ದಾರೆ.
ಸುಮಾರು 35,000 ತಮಿಳುನಾಗರಿಕರು ಎಲ್‌ಟಿಟಿಇ ಪ್ರಾಬಲ್ಯದ ಪ್ರದೇಶದಿಂದ ಸುರಕ್ಷಿತವಾಗಿ ತಪ್ಪಿಸಿಕೊಂಡಿದ್ದಾರೆಂದು ಅವರು ನುಡಿದರು. ಯುದ್ಧ ವಲಯದಿಂದ ತಪ್ಪಿಸಿಕೊಳ್ಳುವ ಕೈದಿಗಳ ಸಾಗಣೆಗೆ ಶ್ರೀಲಂಕಾದ ನೌಕಾಪಡೆಯ ದೋಣಿಗಳು ಧಾವಿಸಿವೆ. ಏತನ್ಮಧ್ಯೆ, ಸೇನೆ ನಿಯಂತ್ರಿತ ಪ್ರದೇಶದೊಳಕ್ಕೆ ತಪ್ಪಿಸಿಕೊಳ್ಳುತ್ತಿದ್ದ ಸಾವಿರಾರು ಜನರ ಗುಂಪಿನಲ್ಲಿದ್ದ ಆತ್ಮಾಹುತಿ ಬಾಂಬರ್ ಸ್ಫೋಟಿಸಿಕೊಂಡಿದ್ದರಿಂದ 17 ಜನರು ಬಲಿಯಾಗಿದ್ದಾರೆಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಸೇನೆಯ ಮುನ್ನಡೆಗೆ ಕಡಿವಾಣ ಹಾಕಲು ಬಂಡುಕೋರರು ನಿರ್ಮಿಸಿದ್ದ ಮಣ್ಣಿನ ಗೋಡೆಯನ್ನು ಸೈನಿಕರು ಉರುಳಿಸಿದ ಬಳಿಕ ಸುಮಾರು 5000 ಜನರು ಯುದ್ಧವಲಯದಿಂದ ತಪ್ಪಿಸಿಕೊಂಡರು. ಶ್ರೀಲಂಕಾ ಸೇನೆಯ ಬಳಿ ಆಶ್ರಯಪಡೆಯಲು ಯತ್ನಿಸಿದ ಸಾವಿರಾರು ಜನರ ಮೇಲೆ ಸೋಮವಾರ ಬೆಳಿಗ್ಗೆ ಎಲ್‌ಟಿಟಿಇ ಆತ್ಮಾಹುತಿ ಬಾಂಬರ್ ದಾಳಿ ನಡೆಸಿದನೆಂದು ಸಚಿವಾಲಯದ ವೆಬ್‌ಸೈಟ್ ತಿಳಿಸಿದೆ. ಹೇಡಿತನದ ಕೃತ್ಯದಿಂದ ಮಹಿಳೆಯರು ಮತ್ತು ಮಕ್ಕಳು ಸೇರಿ 17 ನಾಗರಿಕರು ಸತ್ತಿದ್ದಾರೆಂದು ಮೂಲಗಳು ಹೇಳಿವೆ.
ಗುಂಡು ಹಾರಾಟ ನಿಷೇಧ ಪ್ರದೇಶವು ತೆಂಗಿನ ಮರಗಳಿಂದ ಕೂಡಿದ 6.5 ಚದರಮೈಲಿ ವ್ಯಾಪ್ತಿಯ ಪ್ರದೇಶವಾಗಿದ್ದು ಅಲ್ಲಿ ಎಲ್‌ಟಿಟಿಇ ಉಗ್ರಗಾಮಿಗಳು ಹತ್ತಾರು ಸಾವಿರ ನಾಗರಿಕರನ್ನು ರಕ್ಷಣಾ ಕವಚದಂತೆ ಬಳಸಿಕೊಂಡು ಸೇನೆಯ ವಿರುದ್ಧ ಕಟ್ಟಕಡೆಯ ಹೋರಾಟಕ್ಕೆ ಇಳಿದಿದ್ದಾರೆ. |