ಫಿಜಿಯ ಮಿಲಿಟರಿ ಸಂವಿಧಾನ ರದ್ದು ಮಾಡಿ ಚುನಾವಣೆಯನ್ನು 2014ಕ್ಕೆ ವಿಳಂಬ ಮಾಡಿದ ಕ್ರಮವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಟೀಕಿಸಿದೆ. ಇದೊಂದು ಪ್ರಜಾಸತ್ತಾತ್ಮಕವಲ್ಲದ ಕ್ರಮವಾಗಿದ್ದು, ಒಂದು ಹೆಜ್ಜೆ ಹಿಂದೆ ಹೋಗಿದೆಯೆಂದು ಟೀಕಿಸಿದೆ.
2006ರಲ್ಲಿ ಆಯ್ಕೆಯಾಗಿದ್ದ ಸರ್ಕಾರವನ್ನು ಪದಚ್ಯುತಗೊಳಿಸಿದ ಮಿಲಿಟರಿ ಆಡಳಿತಗಾರ ಬೈನಿಮಾರಾಮಾ ಸುಧಾರಣೆಗಳನ್ನು ತರುವುದಾಗಿ ಭರವಸೆ ನೀಡಿದ್ದರು. ಕಳೆದ ವಾರ, ಮಿಲಿಟರಿ ಸರ್ಕಾರ ಅಕ್ರಮವೆಂದು ಕೋರ್ಟ್ ತೀರ್ಪು ನೀಡಿದ ಬಳಿಕ ನ್ಯಾಯಾಂಗವನ್ನು ವಜಾ ಮಾಡಿದ ಅವರು ತುರ್ತುಸ್ಥಿತಿ ನಿಯಂತ್ರಣಗಳ ನಾಯಕರಾಗಿ ಮರುನೇಮಕಗೊಂಡರು.
ಭದ್ರತಾ ಮಂಡಳಿ ಸದಸ್ಯರು ಫಿಜಿ ಪರಿಸ್ಥಿತಿ ಬಗ್ಗೆ ತೀವ್ರ ಆತಂಕಿತರಾಗಿದ್ದಾರೆಂದು ವಿಶ್ವಸಂಸ್ಥೆಗೆ ಮೆಕ್ಸಿಕೊ ರಾಯಭಾರಿ ಕ್ಲಾಡ್ ಹೆಲ್ಲರ್ ತಿಳಿಸಿದರು.ಫಿಜಿ ಪ್ರಜಾಪ್ರಭುತ್ವದತ್ತ ದಾಪುಗಾಲಿಟ್ಟು ನ್ಯಾಯಯುತ ಚುನಾವಣೆ ಶೀಘ್ರದಲ್ಲೇ ನಡೆಸುತ್ತದೆಂದು ಭದ್ರತಾ ಮಂಡಳಿ ಸದಸ್ಯರು ಆಶಯ ಹೊಂದಿದ್ದಾರೆಂದು ಹೆಲ್ಲರ್ ಹೇಳಿದರು. ಫಿಜಿ ಮಿಲಿಟರಿ ಸರ್ವಾಧಿಕಾರದ ನೆಲೆಯಾಗಿದ್ದು ಪ್ರಜಾಪ್ರಭುತ್ವ ಮರುಸ್ಥಾಪನೆ ಮಾಡಬೇಕೆಂದು ಆಸ್ಟ್ರೇಲಿಯ ಮತ್ತು ನ್ಯೂಜಿಲೆಂಡ್ ಸರ್ಕಾರಗಳು ಒತ್ತಾಯಿಸಿವೆ. |