8 ಜನರಲ್‌ಗಳನ್ನು ಪದಚ್ಯುತಗೊಳಿಸುವಂತೆ ಮತ್ತು ಸೇನೆಯಲ್ಲಿ ನೇಮಕಾತಿ ನಿಲ್ಲಿಸುವಂತೆ ನೀಡಿದ ಆದೇಶಗಳನ್ನು ನಿರ್ಲಕ್ಷಿಸಿದ್ದೇಕೆಂದು 24 ಗಂಟೆಗಳೊಳಗೆ ಉತ್ತರಿಸುವಂತೆ ನೇಪಾಳ ಸರ್ಕಾರವು ಸೇನಾ ಮುಖ್ಯಸ್ಥರಿಗೆ ಗಡುವು ನೀಡಿದೆ.
ಸೇನೆಯ ಮುಖ್ಯಸ್ಥ ರೂಕ್‌ಮಾಂಗುಡ್ ಕಟಾವಾಲ್ ಅವರಿಗೆ ಸೇನೆಯ ನೇಮಕಾತಿ ಬಗ್ಗೆ ಮತ್ತು ಸರ್ಕಾರ ನಿವೃತ್ತಿ ಮಾಡಿದ 8 ಜನರಲ್‌ಗಳ ಮರುನೇಮಕದ ಬಗ್ಗೆ ತೋರಿದ ಆತುರ ಮತ್ತು ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸದ ನಿರ್ಧಾರದ ಬಗ್ಗೆ 24 ಗಂಟೆಯೊಳಗೆ ಸ್ಪಷ್ಟೀಕರಣ ನೀಡುವಂತೆ ನೋಟಿಸ್ ನೀಡಿರುವುದಾಗಿ ಮಾಹಿತಿ ಸಚಿವ ಕೃಷ್ಣ ಬಹಾದುರ್ ಮಹಾರಾ ತಿಳಿಸಿದ್ದಾರೆ.
ಆದರೆ ಅವರ ಆದೇಶ ಉಲ್ಲಂಘನೆ ಮಾಡಿದರೆ ಸರ್ಕಾರ ಯಾವ ರೀತಿ ಪ್ರತಿಕ್ರಿಯಿಸುವುದೆಂಬುದನ್ನು ಮಹಾರಾ ಹೇಳಲಿಲ್ಲ.ಆದರೆ ಮಿಲಿಟರಿ ಉಪ ಕಾನೂನಿನ ರೀತ್ಯ 24 ಗಂಟೆಯೊಳಗೆ ಸ್ಪಷ್ಟೀಕರಣ ನೀಡದಿದ್ದರೆ ಅಥವಾ ಅವರ ಸ್ಪಷ್ಟೀಕರಣ ಸರ್ಕಾರಕ್ಕೆ ತೃಪ್ತಿಕರವಿಲ್ಲವೆಂದು ಕಂಡುಬಂದರೆ ಸೇನಾಮುಖ್ಯಸ್ಥರನ್ನು ಅವರ ಸ್ಥಾನದಿಂದ ಪದಚ್ಯುತಗೊಳಿಸಬಹುದೆಂದು ನೇಪಾಳ ನ್ಯೂಸ್ ತಿಳಿಸಿದೆ.
ಸೇನಾ ಮುಖ್ಯಸ್ಥರನ್ನು ವಜಾ ಮಾಡುವ ಉದ್ದೇಶದಿಂದಲೇ ನೋಟಿಸ್ ನೀಡಲಾಗಿದೆಯೆಂದು ಈ ಕ್ರಮವನ್ನು ವ್ಯಾಖ್ಯಾನಿಸಲಾಗಿದೆ.ಸರ್ಕಾರ ಮತ್ತು ಮಿಲಿಟರಿ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಕಟಾವಾಲ್ ಪ್ರಚಂಡ ಅವರನ್ನು ಸೋಮವಾರ ಭೇಟಿ ಮಾಡಿದ್ದರು. ಎಲ್ಲ ಮಾಜಿ ಬಂಡುಕೋರ ಹೋರಾಟಗಾರರನ್ನು ರಕ್ಷಣಾಪಡೆಯೊಳಗೆ ವಿಲೀನಗೊಳಿಸುವ ಮಾವೋವಾದಿಗಳ ಯೋಜನೆಗೆ ಸೇನೆ ಖಂಡತುಂಡವಾಗಿ ನಿರಾಕರಿಸಿದ್ದರಿಂದ ಸಂಬಂಧ ಹದಗೆಟ್ಟಿತ್ತು. |