ಕಾಶ್ಮೀರ ವಿವಾದ ಪರಿಹಾರವಾಗದೇ ನೆನೆಗುದಿಗೆ ಬಿದ್ದ ಇತರೆ ವಿಷಯಗಳನ್ನು ಇತ್ಯರ್ಥ ಮಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಮಂತ್ರಿ ಯುಸುಫ್ ರಾಜಾ ಗಿಲಾನಿ ತಿಳಿಸಿದ್ದು, ಕಾಶ್ಮೀರ ವಿವಾದ ಪರಿಹಾರ ಮಾಡುವಂತೆ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದರು.
ಕಾಶ್ಮೀರವು ಇನ್ನೂ ಮುಖ್ಯವಿಷಯವಾಗಿದ್ದು, ಅದರ ಪರಿಹಾರವಾಗದೇ ಇತರೆ ವಿಷಯಗಳ ಇತ್ಯರ್ಥವಿಲ್ಲ ಎಂದು ಗಿಲಾನಿ ಜಿಯೊ ನ್ಯೂಸ್ ಚಾನೆಲ್‌ಗೆ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಮುಂಬೈ ಭಯೋತ್ಪಾದನೆ ದಾಳಿ ಬಳಿಕ ವಿಶ್ವಾಸ ಕುದುರಿಸುವ ಕ್ರಮಗಳಿಗೆ ಧಕ್ಕೆಯುಂಟಾಯಿತು ಎಂದು ಹೇಳಿದ ಅವರು, ಆದಾಗ್ಯೂ ಕಾಶ್ಮೀರ ಸೇರಿದಂತೆ ಎಲ್ಲ ವಿಷಯಗಳ ಇತ್ಯರ್ಥವನ್ನು ಮಾತುಕತೆ ಮೂಲಕ ನಡೆಸಲು ನಾವು ಸಿದ್ಧರಿದ್ದೇವೆ ಮತ್ತು ಪ್ರಾಮಾಣಿಕರಾಗಿದ್ದೇವೆ ಎಂದು ನುಡಿದರು.
ಮುಂಬೈ ಭಯೋತ್ಪಾದನೆ ದಾಳಿ ಬಳಿಕ ಭಾರತ ಪಾಕ್ ಜತೆ ಜಂಟಿ ಮಾತುಕತೆ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಗಿಲಾನಿ ಹೇಳಿಕೆ ಹೊರಬಿದ್ದಿದೆ. ಮುಂಬೈ ದಾಳಿಗೆ ಯೋಜಿಸಿದ ಪಾಕಿಸ್ತಾನ ನೆಲದಲ್ಲಿರುವ ಉಗ್ರಗಾಮಿ ಶಕ್ತಿಗಳ ವಿರುದ್ಧ ಕ್ರಮ ಕೈಗೊಂಡರೆ ಮಾತ್ರ ಶಾಂತಿ ಪ್ರಕ್ರಿಯ ಪುನಾರಂಭವಾಗುತ್ತದೆಂದು ಭಾರತ ತಿಳಿಸಿದೆ.
ಕಾಶ್ಮೀರ ವಿಷಯದ ಪರಿಹಾರ ಮತ್ತು ಪಾಕಿಸ್ತಾನದಿಂದ ಆಫ್ಘನ್ ನಿರಾಶ್ರಿತರ ಗಡೀಪಾರು ಮುಖ್ಯ ವಿಷಯಗಳಾಗಿವೆ ಎಂದು ಗಿಲಾನಿ ನುಡಿದರು. ಆಫ್ಘನ್ ನಿರಾಶ್ರಿತರ ಸಂಖ್ಯೆಯು 3.5 ಮಿಲಿಯ ದಾಟಿದ್ದರಿಂದ ಅವರ ಉಪಸ್ಥಿತಿ ಪ್ರಮುಖ ವಿಷಯವಾಗಿದೆ. |