ಬಂಡುಕೋರರ ನಾಯಕ ಪ್ರಭಾಕರನ್‌ಗೆ ಶರಣಾಗುವಂತೆ ನೀಡಿದ್ದ ಗಡುವು ಮಂಗಳವಾರ 12ಗಂಟೆಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಶ್ರೀಲಂಕಾದ ಸೇನಾಪಡೆಗಳು ಎಲ್‌ಟಿಟಿಇ ವಿರುದ್ದ ತನ್ನ ಅಂತಿಮ ಸಮರ ಆರಂಭಿಸಿವೆ. ಎಲ್‌ಟಿಟಿಇಯನ್ನು ಸಂಪೂರ್ಣವಾಗಿ ದಬ್ಬುವ ಕಾರ್ಯಾಚರಣೆ ಬಗ್ಗೆ ಶ್ರೀಲಂಕಾ ಸೇನೆ ವಕ್ತಾರ ಬ್ರಿಗೇಡಿಯರ್ ಉದಯ ನಾನಯಕ್ಕರಾ ದೃಢಪಡಿಸಿದ್ದು ಸೇನಾಪಡೆಗಳು ಪ್ರಭಾಕರನ್ ವಿರುದ್ಧ ಅಂತಿಮ ಆಕ್ರಮಣ ಆರಂಭಿಸಿದ್ದಾರೆಂದು ಹೇಳಿದರು. ಆದರೆ ಎಲ್‌ಟಿಟಿಇ ಅಧೀನದ ಭೂಪ್ರದೇಶದಲ್ಲಿ ಸಿಕ್ಕಿಬಿದ್ದಿರುವ, ಸಾಧ್ಯವಾದಷ್ಟು ನಾಗರಿಕರ ಪ್ರಾಣ ಉಳಿಸುವುದು ಸರ್ಕಾರದ ಮುಖ್ಯಕಾಳಜಿಯಾಗಿದೆ ಎಂದು ನಾನಯಕ್ಕರಾ ಖಾಸಗಿ ಟಿವಿ ಚಾನೆಲ್ ಜತೆ ಮಾತನಾಡುತ್ತಾ ತಿಳಿಸಿದರು.ಎಲ್‌ಟಿಟಿಇ ಮುಖ್ಯಸ್ಥನು ಇರುವ ಸಂಭವನೀಯ ಸ್ಥಳದ ಬಗ್ಗೆ ಸುಳಿವು ನೀಡಿದ ಅವರು, ಪ್ರಭಾಕರನ್ ಇನ್ನೂ ಜೀವಂತವಿದ್ದು ಯುದ್ದದ ಸಾರಥ್ಯ ವಹಿಸಿದ್ದಾನೆ. ಬಹುಷಃ ಎಲ್‌ಟಿಟಿಇ ಸುರಕ್ಷಿತ ವಲಯಗಳಲ್ಲಿ ತಮಿಳು ನಾಗರಿಕರ ಮರೆಯಲ್ಲಿ ಅವನು ಅಡಗಿರಬಹುದು ಎಂದು ಅವರು ನುಡಿದಿದ್ದಾರೆ. ಪ್ರಭಾಕರನ್ ಪುತ್ರ ಚಾರ್ಲ್ಸ್ ಆಂತೋನಿ ಸೇನೆಯ ದಾಳಿಯಲ್ಲಿ ತೀವ್ರ ಗಾಯಗೊಂಡಿದ್ದು, ಎಲ್‌ಟಿಟಿಇ ಸುರಕ್ಷಿತ ವಲಯಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳಲ್ಲಿ ಪ್ರಸಕ್ತ ಚೇತರಿಸಿಕೊಳ್ಳುತ್ತಿದ್ದಾನೆಂದು ನಾನಯಕ್ಕರಾ ತಿಳಿಸಿದರು. ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಭಾಕರನ್ ಸಯಾನೈಡ್ ಮಾತ್ರೆ ಸೇವಿಸುವನೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಲಕ್ಷಾಂತರ ಮಂದಿ ಮುಗ್ಧ ಯುವಕರನ್ನು ಪ್ರಚೋದಿಸಿ ಸಯಾನೈಡ್ ಸಂಸ್ಕೃತಿಯನ್ನು ಹುಟ್ಟುಹಾಕಿದ್ದು ಅವನೇ. ಅಂತಹ ಪರಿಸ್ಥಿತಿ ಬಂದರೆ ಅವನ ಪಾಪಗಳಿಗೆ ಅದೇ ಗತಿ ಅನುಭವಿಸುತ್ತಾನೆಂದು ಅವರು ಹೇಳಿದರು. |