ಪಾಕಿಸ್ತಾನದ ಸ್ವಾತ್ ಕಣಿವೆಯ ತಾಲಿಬಾನ್ ಉಗ್ರಗಾಮಿಗಳು ತಾವು ಬಲವಂತದಿಂದ ಕೈವಶ ಮಾಡಿಕೊಂಡ ಬುನೇರ್ ಜಿಲ್ಲೆಯನ್ನು ತ್ಯಜಿಸಲು ನಿರಾಕರಿಸುತ್ತಿದ್ದು, ಅಲ್ಲಿ ದೊಡ್ಡ ನೆಲೆಯನ್ನು ಸ್ಥಾಪಿಸಿದ್ದಾರೆ.
ತಾಲಿಬಾನ್ ಮುಂದುವರಿದ ಉಪಸ್ಥಿತಿಯಿಂದಾಗಿ ವಾಯವ್ಯ ಗಡಿ ಪ್ರಾಂತ್ಯನ್ನು ಆಳುತ್ತಿದ್ದ ಅವಾಮಿ ನ್ಯಾಷನಲ್ ಪಕ್ಷದ ನಾಯಕರು ಜಾಗ ಖಾಲಿ ಮಾಡುವಂತಾಗಿದೆ ಮತ್ತು ತಾಲಿಬಾನಿಗಳನ್ನು ತೆರವು ಮಾಡಿಸಲು ಬುಡಕಟ್ಟು ಶಾಂತಿ ಸ್ಥಾಪನೆಯ ಜಿರ್ಗಾ ಮಧ್ಯಪ್ರವೇಶ ಮಾಡಿದ್ದು ಕೂಡ ವಿಫಲವಾಗಿದೆ ಎಂದು ನ್ಯೂಸ್ ಡೇಲಿ ಮಂಗಳವಾರ ವರದಿ ಮಾಡಿದೆ.ಸುಮಾರು ಎರಡು ವಾರಗಳ ಕೆಳಗೆ ಸ್ವಾತ್‌ನ ತಾಲಿಬಾನ್ ಬುನೇರ್ ಜಿಲ್ಲೆಗೆ ಲಗ್ಗೆ ಹಾಕಿದೆ.
ಸುಲ್ತಾನ್‌ವಾಸ್ ಗ್ರಾಮದಲ್ಲಿ ಉದ್ಯಮಿಯ ಅಧೀನದಲ್ಲಿದ್ದ ಮೂರು ಮಹಡಿಗಳ ಬಂಗ್ಲೆಯನ್ನು ಮುಖ್ಯಕಚೇರಿಯಂತೆ ತಾಲಿಬಾನಿಗಳು ಬಳಸುತ್ತಿದ್ದಾರೆಂದು ಸುದ್ದಿಪತ್ರಿಕೆ ವರದಿ ಮಾಡಿದೆ. ಬುನೇರ್ ಉಸ್ತುವಾರಿಯನ್ನು ತಾಲಿಬಾನ್ ಕಮಾಂಡರ್ ಫತೇ ಮಹಮದ್ ನೋಡಿಕೊಳ್ಳುತ್ತಿದ್ದು, ಜನರ ದೂರನ್ನು ಆಲಿಸಲು ಸ್ಥಳೀಯ ಕಾಜಿಯಾಗಿ ಮುಫ್ತಿ ಬಷೀರ್ ಅವರನ್ನು ತಾಲಿಬಾನ್ ನೇಮಕ ಮಾಡಿದೆ.
ಬುನೇರ್‌ನ ಎಎನ್‌ಪಿ ಶಾಸಕರು ಮತ್ತು ಸಂಸತ್ ಸದಸ್ಯರು ತವರು ಜಿಲ್ಲೆಯನ್ನು ತ್ಯಜಿಸಿದ್ದಾರೆಂದು ಮತ್ತು ಇತರೆ ಪಕ್ಷಗಳ ನಾಯಕರು ಸ್ಥಳೀಯರಲ್ಲದ ತಾಲಿಬಾನಿಗಳನ್ನು ಅಟ್ಟಲು ಎಲ್ಲ ಸಂಪನ್ಮೂಲ ಬಳಸುವಂತೆ ವಾಯವ್ಯ ಪ್ರಾಂತ್ಯದ ಸರ್ಕಾರಕ್ಕೆ ಒತ್ತಡ ಹೇರುತ್ತಿದ್ದಾರೆ.
ಎಎನ್‌ಪಿ ಮತ್ತಿತರ ಪಕ್ಷಗಳ ಬಹುತೇಕ ನಾಯಕರು ಸ್ವಾತ್ ಜಿಲ್ಲೆಯಿಂದ ಹೊರಕ್ಕೆ ತೆರಳಿದ್ದು, ಬಹುತೇಕ ಭಾಗಗಳಲ್ಲಿ ಈಗ ಮೌಲಾನಾ ಫಜಲುಲ್ಲಾ ಸಾರಥ್ಯದಲ್ಲಿ ತಾಲಿಬಾನ್ ಉಗ್ರರದ್ದೇ ಅಧಿಪತ್ಯ. ಸುಮಾರು 130 ಎಎನ್‌ಪಿ ಕಾರ್ಯಕರ್ತರನ್ನು ಮತ್ತು ಅವರ ಬಂಧುಗಳನ್ನು ತಾಲಿಬಾನಿಗಳು ಕೊಂದಿದ್ದಾರೆ. |