ಆಫ್ಘಾನಿಸ್ತಾನ ಗಡಿಯ ಬಳಿ ಉಗ್ರಗಾಮಿಗಳ ಅಡಗುತಾಣಗಳ ಮೇಲೆ ಪಾಕಿಸ್ತಾನದ ಹೆಲಿಕಾಪ್ಟರ್‌ನ ಬಂದೂಕುಗಳ ದಾಳಿಗೆ 24 ಉಗ್ರಗಾಮಿಗಳು ಹತರಾಗಿದ್ದಾರೆ ಮತ್ತು ಅವರ ನೆಲೆಗಳು ನಾಶವಾಗಿವೆ ಎಂದು ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದರು.
ಭಾನುವಾರ ಈ ಕಾರ್ಯಾಚರಣೆ ನಡೆಸಲಾಗಿದ್ದು, ಉಗ್ರಗಾಮಿಗಳ ಸುಮಾರು ನಾಲ್ಕು ನೆಲೆಗಳು ನಾಶವಾಗಿವೆ ಎಂದು ಗುರುತು ಹೇಳಲು ಬಯಸದ ಅಧಿಕಾರಿಯೊಬ್ಬರು ತಿಳಿಸಿದರು.
ಅರೆ ಸ್ವಾಯತ್ತ ಬುಡಕಟ್ಟು ಪ್ರದೇಶ ಒರ್ಕಾಜಾಯಿನಲ್ಲಿ ಉಗ್ರಗಾಮಿಗಳ ಮೇಲೆ ಭೂ ಮತ್ತು ವಾಯುದಾಳಿ ನಡೆಸಲಾಗಿದೆ. ಸಮೀಪದ ಹಾಂಗು ಪಟ್ಟಣದಲ್ಲಿ ಆತ್ಮಾಹುತಿ ದಾಳಿಯಲ್ಲಿ 20 ಮಂದಿ ಭದ್ರತಾ ಸಿಬ್ಬಂದಿ ಅಸುನೀಗಿದ ಬಳಿಕ ಈ ದಾಳಿ ನಡೆದಿದೆ.ಶನಿವಾರದ ಆತ್ಮಾಹುತಿ ದಾಳಿಗೆ ಹೊಣೆ ಹೊತ್ತ ಉನ್ನತ ತಾಲಿಬಾನ್ ದಂಡಾಧಿಕಾರಿ ಹಕೀಮುಲ್ಲಾ ಮೆಹ್ಸೂದ್ ನಿಯಂತ್ರಿತ ಪ್ರದೇಶದ ಮೇಲೆ ದಾಳಿಯನ್ನು ಗುರಿಯಿರಿಸಲಾಗಿತ್ತು.
ಅಮೆರಿಕದ ಡ್ರೋನ್ ವಿಮಾನಗಳಿಂದ ಕ್ಷಿಪಣಿ ದಾಳಿಗೆ ಪ್ರತೀಕಾರದ ಕ್ರಮವಾಗಿ ಆತ್ಮಾಹುತಿ ದಾಳಿಗಳನ್ನು ನಡೆಸಿದ್ದಾಗಿ ಹಕೀಮುಲ್ಲಾ ತಿಳಿಸಿದ್ದ.ಇಸ್ಲಾಮಿಕ್ ಉಗ್ರರ ಮೇಲೆ ಡ್ರೋನ್ ದಾಳಿಗಳಿಗೆ ಪ್ರತಿಕಾರ ತೀರಿಸಲು ಆತ್ಮಾಹುತಿ ಬಾಂಬ್ ದಾಳಿ ನಡೆಸುವುದಾಗಿ ಬೈತುಲ್ಲಾ ಮಸೂದ್ ಬೆದರಿಕೆ ಹಾಕಿದ್ದಾನೆ. ಆದರೆ ತೀವ್ರವಾದಿಗಳಲ್ಲಿ ಒಡಕು ಕಾಣಿಸಿಕೊಂಡಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಮೆಹ್ಸೂದ್ ಬೆಂಬಲಿಗರು ತಾಲಿಬಾನ್ ಪರ ಧರ್ಮಗುರು ಸೂಫಿ ಮಹಮ್ಮದ್‌ನ ಇಬ್ಬರು ಅನುಯಾಯಿಗಳನ್ನು ಕೊಂದಿರುವುದಾಗಿ ತಿಳಿಸಿದ್ದಾರೆ. |