ತಮಿಳು ಬಂಡುಕೋರರು ಯಾವುದೇ ಕಾರಣಕ್ಕೂ ಶರಣಾಗತಿ ಪ್ರಶ್ನೆಯೇ ಇಲ್ಲ ಎಂದು ಎಲ್‌ಟಿಟಿಇ ಸುದ್ದಿಸಂಸ್ಥೆಯೊಂದಕ್ಕೆ ಮಂಗಳವಾರ ಅಧಿಕೃತವಾಗಿ ತಿಳಿಸಿದೆ.
ಬಂಡುಕೋರರ ನಾಯಕ ಪ್ರಭಾಕರನ್‌ಗೆ ಶರಣಾಗುವಂತೆ ಶ್ರೀಲಂಕಾ ಸರ್ಕಾರ ನೀಡಿದ್ದ ಗಡುವು ಮಂಗಳವಾರ 12ಗಂಟೆಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಶ್ರೀಲಂಕಾದ ಸೇನಾಪಡೆಗಳು ಎಲ್‌ಟಿಟಿಇ ವಿರುದ್ದ ತನ್ನ ಅಂತಿಮ ಸಮರ ಆರಂಭಿಸಿವೆ.
ಎಲ್‌ಟಿಟಿಇಯನ್ನು ಸಂಪೂರ್ಣವಾಗಿ ದಬ್ಬುವ ಕಾರ್ಯಾಚರಣೆ ಬಗ್ಗೆ ಶ್ರೀಲಂಕಾ ಸೇನೆ ವಕ್ತಾರ ಬ್ರಿಗೇಡಿಯರ್ ಉದಯ ನಾನಯಕ್ಕರಾ ದೃಢಪಡಿಸಿದ್ದು ಸೇನಾಪಡೆಗಳು ಪ್ರಭಾಕರನ್ ವಿರುದ್ಧ ಅಂತಿಮ ಆಕ್ರಮಣ ಆರಂಭಿಸಿರುವುದಾಗಿ ತಿಳಿಸಿದ್ದರು.
ಸರ್ಕಾರ ಅಂತಿಮ ನಿಲುವು ಹೊರಬೀಳುತ್ತಿದ್ದ ಬೆನ್ನಲ್ಲೆಯೇ ಎಲ್‌ಟಿಟಿಇ ಕೂಡ ತಾನು ಶರಣಾಗುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದೆ. ಎಲ್‌ಟಿಟಿಇ ವಿರುದ್ಧ ಲಂಕಾ ಸರ್ಕಾರ ಬಲವಂತವಾಗಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಎಲ್‌ಟಿಟಿಇ ಶಾಂತಿಪಾಲನಾ ಘಟಕದ ಸೀವರತ್ನಂ ಪುಲೀದೇವನ್ ಅಂತಾರಾಷ್ಟ್ರೀಯ ಸಮುದಾಯವನ್ನು ಒತ್ತಾಯಿಸಿದ್ದಾರೆ. ಆದರೆ ಈ ಬೇಡಿಕೆಯನ್ನು ಶ್ರೀಲಂಕಾ ಸರ್ಕಾರ ತಳ್ಳಿ ಹಾಕಿದೆ.
ಏನೇ ಆದರೂ ಎಲ್‌ಟಿಟಿಇ ಯಾವಾಗಲೂ ಶರಣಾಗುವ ಮಾತೇ ಇಲ್ಲ ಎಂದು ಸ್ಪಷ್ಟಪಡಿಸಿದ್ದು, ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸುತ್ತೇವೆ ಹಾಗೂ ಅದರಲ್ಲಿ ತಮಿಳು ಜನರ ಬೆಂಬಲದೊಂದಿಗೆ ಜಯಸಾಧಿಸುತ್ತೇವೆ ಎಂಬ ವಿಶ್ವಾಸ ತಮಗಿದೆ ಎಂದು ಪುಲೀದೇವನ್ ಸುದ್ದಿಸಂಸ್ಥೆಯೊಂದರ ಜತೆ ದೂರವಾಣಿ ಮುಖೇನ ಮಾತನಾಡುತ್ತ ತಿಳಿಸಿದ್ದಾರೆ. |