ಕಳೆದ ಎರಡು ದಿನಗಳಿಂದ ತಮಿಳು ವ್ಯಾಘ್ರ ಬಂಡುಕೋರರ ಹಿಡಿತದಲ್ಲಿರುವ ಕಟ್ಟಕಡೆಯ ಪ್ರದೇಶದಿಂದ ತಮಿಳು ನಾಗರಿಕರು ಸಾಮೂಹಿಕ ವಲಸೆ ಹೋಗುತ್ತಿದ್ದು, 63,000 ತಮಿಳು ನಾಗರಿಕರು ತಪ್ಪಿಸಿಕೊಂಡಿದ್ದಾರೆಂದು ಶ್ರೀಲಂಕಾ ತಿಳಿಸಿದೆ.
ಬಂಡುಕೋರ ನಾಯಕನಿಗೆ ಹುಡುಕುತ್ತಾ ಉತ್ತರದಲ್ಲಿ ಸಣ್ಣ ಪ್ರದೇಶದ ಮೇಲೆ ಆಕ್ರಮಣ ಮಾಡಿರುವುದಾಗಿ ಸೇನೆ ತಿಳಿಸಿದೆ.ಕೆಲವು ನಾಗರಿಕರು ಸಮುದ್ರ ಮಾರ್ಗವಾಗಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ನೌಕಾಪಡೆ ಅವರನ್ನು ತಡೆದು ಸರ್ಕಾರದ ಶಿಬಿರಗಳಿಗೆ ವರ್ಗಾವಣೆ ಮಾಡಿದೆ.
ಇತ್ತೀಚಿನ ಹೋರಾಟದಲ್ಲಿ ಸೇನೆ ಸುಮಾರು 1000 ಜನರನ್ನು ಕೊಂದುಹಾಕಿದೆಯೆಂದು ಬಂಡುಕೋರರು ಆಪಾದಿಸಿದ್ದರೂ ಆ ವರದಿ ದೃಢಪಟ್ಟಿಲ್ಲ.ಸೋಮವಾರ ಬೆಳಿಗ್ಗೆಯಿಂದ 2300 ನಾಗರಿಕರು ಗಾಯಗೊಂಡಿದ್ದಾರೆಂದು ಬಂಡುಕೋರರು ತಿಳಿಸಿದ್ದು, ತಮಿಳು ಜನರನ್ನು ಮಾನವ ರಕ್ಷಾಕವಚದಂತೆ ಬಳಸಿಕೊಂಡು ನೆಲಬಾಂಬುಗಳನ್ನು ತೆರವು ಮಾಡಲು ಸೇನೆ ಬಲವಂತ ಮಾಡುತ್ತಿದೆಯೆಂದು ಆರೋಪಿಸಿದ್ದಾರೆ. ಶರಣಾಗುವಂತೆ ಅಥವಾ ಅಂತಿಮ ಪ್ರಹಾರ ಎದುರಿಸುವಂತೆ ಎಲ್‌ಟಿಟಿಇಗೆ ನೀಡಿದ್ದ ಗಡುವು ಮಂಗಳವಾರ 6.39ಕ್ಕೆ ಅಂತ್ಯಗೊಂಡಿದ್ದು, ಬಂಡುಕೋರರು ಮೌನಕ್ಕೆ ಶರಣಾಗಿದ್ದರು. ಆದಾಗ್ಯೂ, ಕೆಲವು ಗಂಟೆಗಳ ಬಳಿಕ ಸಮರವನ್ನು ಮುಂದುವರಿಸುವುದಾಗಿ ಬಂಡುಕೋರ ಮುಖಂಡನೊಬ್ಬ ಶಪಥ ತೊಟ್ಟಿದ್ದಾನೆ.
'ಎಲ್‌ಟಿಟಿಇ ಶರಣಾಗುವುದಿಲ್ಲ ಮತ್ತು ನಾವು ಹೋರಾಡುತ್ತೇವೆ. ತಮಿಳು ಜನರ ಸಹಾಯ ಗಳಿಸುತ್ತೇವೆಂಬ ವಿಶ್ವಾಸ ತಮಗಿರುವುದಾಗಿ' ಸೀವಾರತ್ನಂ ಪುಲೀದೇವನ್ ತಿಳಿಸಿದ್ದಾನೆ. ತಮಿಳು ವ್ಯಾಘ್ರಗಳ ನಾಯಕ ಪ್ರಭಾಕರನ್ ಇರುವಿಕೆ ಬಗ್ಗೆ ತಮಗೆ ಸುಳಿವು ಸಿಕ್ಕಿದೆಯೆಂದು ಶ್ರೀಲಂಕಾ ಸೇನೆಯ ಮುಖ್ಯಸ್ಥ ಸರತ್ ಫೋಯಿನ್‌ಸೆಕಾ ತಿಳಿಸಿದರು. ಅವನು ಅಡಗಿರುವ ಜಾಗ ನಿಖರವಾಗಿ ನಮಗೆ ಗೊತ್ತಿಲ್ಲ. ಆದರೆ ನಾಗರಿಕರ ಮಧ್ಯೆಯೇ ಬಹುಷಃ ಅವನು ಅಡಗಿದ್ದಾನೆಂದು ಶಂಕಿಸಿರುವುದಾಗಿ ಅವರು ಹೇಳಿದ್ದಾರೆ. |