ಶ್ರೀಲಂಕಾದ ಪರಿಸ್ಥಿತಿ ಅತ್ಯಂತ ಕಠಿಣವಾಗಿದೆ ಎಂದು ಹೇಳಿರುವ ಅಮೆರಿಕ, ಶ್ರೀಲಂಕಾ ಸರ್ಕಾರ ಹಾಗೂ ಎಲ್‌ಟಿಟಿಇಯು ಉತ್ತರದ ಭಾಗದಲ್ಲಿ ಸಂಘರ್ಷಕ್ಕೆ ಸಂಬಂಧಪಟ್ಟಂತೆ ತಮ್ಮ ಕರೆಗೆ ಅಥವಾ ಅಂತಾರಾಷ್ಟ್ರೀಯ ಸಮುದಾಯದ ಮನವಿಗೆ ಓಗೊಡುತ್ತಿಲ್ಲ ಆರೋಪಿಸಿದೆ.
ಅವರು ನಮ್ಮ ಕರೆಗೆ ಸ್ಪಂದಿಸುತ್ತಿಲ್ಲ ಮತ್ತು ಅಂತಾರಾಷ್ಟ್ರೀಯ ಕರೆಗೂ ಕಿವಿಗೊಡುತ್ತಿಲ್ಲ ಎಂದು ವಿದೇಶಾಂಗ ಇಲಾಖೆಯ ಉಸ್ತುವಾರಿ ವಕ್ತಾರ ರಾಬರ್ಟ್ ವುಡ್ ಫಾಗಿ ಬಾಟಂನಲ್ಲಿ ವಿದೇಶಾಂಗ ಇಲಾಖೆ ಮುಖ್ಯಕಚೇರಿಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಸರ್ಕಾರ ಮತ್ತು ಎಲ್‌ಟಿಟಿಇ ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ನಾವು ಒತ್ತಡ ಹೇರಲು ಮಾರ್ಗೋಪಾಯಗಳನ್ನು ಹುಡುಕುತ್ತಿದ್ದೇವೆ ಎಂದು ವುಡ್ ತಿಳಿಸಿದ್ದು, ಈ ಸಂಘರ್ಷಕ್ಕೆ ತೆರೆಎಳೆಯಲು ಯಥೇಚ್ಛ ರಾಜತಾಂತ್ರಿಕ ಪ್ರಯತ್ನಗಳು ನಡೆಯುತ್ತಿವೆಯೆಂದು ತಿಳಿಸಿದರು.
ಆದಾಗ್ಯೂ, ಅವುಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಅವರು ನೀಡಲಿಲ್ಲ. ಸಾವಿರಾರು ನಾಗರಿಕರು ಸಂಘರ್ಷ ವಲಯದಿಂದ ತಪ್ಪಿಸಿಕೊಳ್ಳುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಗುಂಡು ಹಾರಾಟ ನಿಷೇಧ ವಲಯದೊಳಕ್ಕೆ ಮತ್ತು ವಲಯದಿಂದ ಹೊರಕ್ಕೆ ಎಡಬಿಡದೇ ಗುಂಡು ಹಾರಿಸುವುದಕ್ಕೆ ಸಂಯಮ ತೋರಬೇಕೆಂದು ಅವರು ತಿಳಿಸಿದರು. |